ಉಡುಪಿ, ನ. 28 (DaijiworldNews/ TA): ನಗರ ಇಂದು ಕೇಸರಿಮಯವಾಗಿದ್ದು, ಮಂತ್ರ ಗೀತಾಕಂಠಗಳ ಉದ್ಘಾರ ಬಹುವಾಗಿ ಕೇಳಿಬರುತ್ತಿತ್ತು. ವಿಶ್ವಗೀತಾ ಪಾರಾಯಣ ವೇದಿಕೆ ಬಳಿ ಭರ್ಜರಿ ಲಕ್ಷಕಂಠ ಭಗವದ್ಗೀತೆ ಪಠಣ ನಡೆಯಿತು, ಸಾವಿರಾರು ಭಕ್ತರು ಭಗವದ್ಗೀತೆ ಶ್ಲೋಕಗಳನ್ನು ಪಠಿಸಿದರು. ಪ್ರಧಾನಿಯವರೊಂದಿಗೆ ಸ್ಥಳೀಯ ಬಿಜೆಪಿ ನಾಯಕರು ಕೂಡ ಭಾಗವಹಿಸಿದ್ದರು. ರೋಡ್ ಶೋ ಮುಗಿಸಿ ಶ್ರೀಕೃಷ್ಣದ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 12.15ಕ್ಕೆ ವೇದಿಕೆಯ ಬಳಿ ಬಂದು ʻಪುರುಷೋತ್ತಮ ಯೋಗʼ ಎನ್ನುವ 15ನೇ ಅಧ್ಯಾಯದ ಶ್ಲೋಕ ಪಠಿಸಿದರು. ಈ ಸಮಾವೇಶದಲ್ಲಿ ಸುಮಾರು 18 ಸಾವಿರ ಭಕ್ತರು ಪಾಲ್ಗೊಂಡಿದ್ದರು. ವೇದಿಕೆಯ ಸುತ್ತಲೂ ಎಸ್ಪಿಜಿ ಮತ್ತು ಪೊಲೀಸ್ ಸಿಬ್ಬಂದಿ ಕಠಿಣ ಭದ್ರತೆಯನ್ನು ವಹಿಸಿದ್ದರು.

ಪ್ರಧಾನಿ ಮೋದಿ ಪಠಿಸಿದ ಭಗವದ್ಗೀತೆಯ 15ನೇ ಅಧ್ಯಾಯ ಅತ್ಯಂತ ಮಹತ್ವದ್ದು. “ನಿನ್ನ ಕರ್ಮವನ್ನ ನೀನು ಮಾಡು, ಫಲಾಚಿಂತೆ ಬಿಡು” ಎನ್ನುವ ಸಂದೇಶವು ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ನೀಡಿದ ಮಾರ್ಗದರ್ಶನವಾಗಿದೆ. ಈ ಅಧ್ಯಾಯವು ಆತ್ಮ, ಪರಮಾತ್ಮ, ವ್ಯಕ್ತಿ, ಜಗತ್ತು ಮತ್ತು ದೇವರ ನಡುವಿನ ಸಂಬಂಧವನ್ನು ವಿವರಿಸುತ್ತದೆ. ಸಂಸಾರದ ಅಶ್ವತ್ಥ ಮರದ ಉದಾಹರಣೆಯ ಮೂಲಕ ಜಗತ್ತಿನ ಸೃಷ್ಟಿ, ಅನಿಶ್ಚಿತತೆ ಮತ್ತು ವೈರಾಗ್ಯದ ಮೂಲಕ ಮುಕ್ತಿಯ ಮಾರ್ಗವನ್ನು ತಿಳಿಸುತ್ತದೆ.
ಈ ಕಾರ್ಯಕ್ರಮಕ್ಕೂ ಮುನ್ನ, ಪ್ರಧಾನಿ ಮೋದಿ ಕೃಷ್ಣಮಠದ ಐವರು ಪ್ರಮುಖ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿದರು. ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪುತ್ತಿಗೆ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಶಿರೂರು ವೇದವರ್ಧನ ತೀರ್ಥ ಸ್ವಾಮೀಜಿ ಮತ್ತು ಕುಕ್ಕೆ ಸುಬ್ರಹ್ಮಣ್ಯ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ನಂತರ ಸ್ವಾಮೀಜಿಗಳಿಂದ ಪ್ರಧಾನಿಗೆ ಹಣೆಗೆ ತಿಲಕ ಹಚ್ಚಿ ತುಳಸಿಮಣಿ ನೀಡಲಾಯಿತು. ಮೋದಿ ಅವರು ಕನಕದಾಸರ ವಿಗ್ರಹಕ್ಕೆ ಹೂಮಾಲೆ ಅರ್ಪಿಸಿ, ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ಮೂರ್ತಿಗೆ ನಮಸ್ಕಾರ ಸಲ್ಲಿಸಿದರು. ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಪ್ರಸಾದ ನೀಡಿ, ಅಂಗಾರಕ ಅಕ್ಷತೆ ನೀಡಿದರು ಮತ್ತು ಮೋದಿ ಅವರಿಗೆ ಮಾಧ್ವ ಸಂಪ್ರದಾಯದ ತಿಲಕ ಹಚ್ಚಿದರು.