ಉಡುಪಿ, ನ. 28 (DaijiworldNews/ TA): ಪ್ರಧಾನಿ ನರೇಂದ್ರ ಮೋದಿ ಉಡುಪಿಯ ಪ್ರಸಿದ್ಧ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ ಪಡೆದಿದ್ದಾರೆ. ಪ್ರಧಾನಿಯವರು ಮಠದ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ವಿಶೇಷವಾಗಿ ಸ್ವರ್ಣ ಲೇಪಿತ ಮಂಟಪದ ಉದ್ಘಾಟನೆ ಕೂಡ ನೆರವೇರಿಸಿದರು.

ಉದ್ಘಾಟನೆಯ ಸಂದರ್ಭದಲ್ಲಿ ಮಠಾಧೀಶರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಮೋದಿಯವರು ನಂತರ ಮುಖ್ಯಪ್ರಾಣ ದೇವರ ಗರುಡ ದರ್ಶನ ಮತ್ತು ಮಠದ ವಿವಿಧ ಗುಡಿಗಳ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಠದ ಪರಿಸರದಲ್ಲಿ ವೈದಿಕರು ಉಪನಿಷತ್ತು, ವೇದ ಪಠಣ ಮತ್ತು ಭಗವದ್ಗೀತೆ ಪಾಠ ನಡೆಸಿದರು. ದೇವರ ಮುಂದೆ ಪ್ರಧಾನಿ ಮೋದಿ ಅವರಿಗೆ ಪ್ರಸಾದ ವಿತರಿಸಲಾಯಿತು. ಪುತ್ತಿಗೆ ಸ್ವಾಮೀಜಿಗಳು, ಶಿರೂರು ವೇದವರ್ಧನ ತೀರ್ಥ, ಪೇಜಾವರ ವಿಶ್ವಪ್ರಸನ್ನ ತೀರ್ಥ, ಕುಕ್ಕೆ ಸುಬ್ರಹ್ಮಣ್ಯ ವಿದ್ಯಾಪ್ರಸನ್ನ ತೀರ್ಥ ಸೇರಿದಂತೆ ಹಲವು ಹಿರಿಯ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಠದ ನಂತರ ಮೋದಿ ಗೀತಾ ಮಂದಿರಕ್ಕೆ ಭೇಟಿ ನೀಡಿ, ನೂತನ ಅನಂತಪದ್ಮನಾಭ ದೇವರ ಪ್ರತಿಮೆ ಅನಾವರಣ ಮಾಡಿದರು. ಧ್ಯಾನ ಮಂದಿರದ ಗೋಡೆಯ ಮೇಲೆ ಭಗವದ್ಗೀತೆ ಶಿಲ್ಪ ಬರಹವನ್ನು ವೀಕ್ಷಿಸಿದರು. ಬಳಿಕ ಲಕ್ಷಕಂಠ ಭಗವದ್ಗೀತೆ ಸಮಾವೇಶದಲ್ಲಿ ಪಾಲ್ಗೊಂಡ ಮೋದಿ, ಸಾವಿರಾರು ಭಕ್ತರೊಂದಿಗೆ ವೇದಿಕೆಯ ಕೆಳಭಾಗದಲ್ಲಿ ಸ್ತೋತ್ರ ಪಠಣದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಪ್ರಧಾನಿಯವರು ಕನಕದಾಸರ ವಿಗ್ರಹಕ್ಕೆ ಹೂಮಾಲೆ ಹಾಕಿ ಗೌರವ ಸಲ್ಲಿಸಿದರು. ನಂತರ ಕನಕನ ಕಿಂಡಿಯ ಒಳಗಿನ ಶ್ರೀ ಕೃಷ್ಣನ ಮೂರ್ತಿಗೆ ನಮಸ್ಕಾರ ಮಾಡಿ, ಪೂಜ್ಯ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರಿಂದ ಪ್ರಸಾದ ಮತ್ತು ತುಳಸಿ ಮಣಿಯನ್ನು ಸ್ವೀಕರಿಸಿದರು. ಪ್ರಧಾನಿಗೆ ಮಾಧ್ವ ಸಂಪ್ರದಾಯದ ತಿಲಕ ಹಾಕಲಾಯಿತು. ಅಂಗಾರಕ ಅಕ್ಷತೆಯನ್ನು ಪುತ್ತಿಗೆ ಸ್ವಾಮೀಜಿಯವರು ವಿಶೇಷ ಹೋಮ ಮಸಿಯಲ್ಲಿ ತಯಾರಿಸಿ ಪ್ರಧಾನಿ ಮೋದಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೂಟ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಉಡುಪಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಶಿವಮೊಗ್ಗ ಸಂಸದ ರಾಘವೇಂದ್ರ, ಶಾಸಕರಾದ ಸುನೀಲ್ ಕುಮಾರ್ ಮತ್ತು ಯಶ್ ಪಾಲ್ ಸುವರ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.