ಸುಳ್ಯ, ನ. 25 (DaijiworldNews/TA): ಮಂಡೆಕೋಲು ರೈತ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಕಾಡಾನೆ ಹಾಗೂ ವನ್ಯ ಮೃಗಗಳ ಹಾವಳಿ ತಡೆಗಟ್ಟಲು ಆಗ್ರಹಿಸಿ ಮಂಡೆಕೋಲಿನಲ್ಲಿ ಬೃಹತ್ ಪ್ರತಿಭಟನಾ ಸಭೆ ಹಾಗೂ ಧರಣಿ ಸತ್ಯಾಗ್ರಹ ನ.24ರಂದು ನಡೆಯಿತು. ಹಲವಾರು ಮಂದಿ ಕೃಷಿಕರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದರು.

ಕಳೆದ 15 ವರ್ಷಗಳಿಂದ ಕಾಡಾನೆ ಹಾಗೂ ಇತರ ವನ್ಯ ಮೃಗಗಳ ಹಾವಳಿಯಿಂದ ಮಂಡೆಕೋಲು ಗ್ರಾಮದ ಕೃಷಿಕರು ತತ್ತರಿಸಿ ಹೋಗಿದ್ದಾರೆ. ಆದುದರಿಂದ ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಆನೆ ಹಾವಳಿ ತಡೆಯಲು ಗ್ರಾಮದ ಅರಣ್ಯದಂಚಿನಲ್ಲಿ ಸರಕಾರದ ವತಿಯಿಂದ ಸೋಲಾರ್ ಬೇಲಿ ನಿರ್ಮಿಸಬೇಕು, ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯಪಡೆ ರಚಿಸಬೇಕು, ಮಂಗಗಳ ಹಾವಳಿ ತಡೆಗೆ ಮಂಕಿ ಪಾರ್ಕ್ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಹಿತರಕ್ಷಣಾ ಸಮಿತಿಯ ಪ್ರಮುಖರಾದ ಸುರೇಶ್ ಕಣರಡ್ಕ, ಶಿವಪ್ರಸಾದ್ ಉಗ್ರಾಣಿಮನೆ, ಜಯರಾಜ್ ಕುಕ್ಕೇಟ್ಟಿ, ಅನಂತ ಪದ್ಮನಾಭ ಭಟ್, ಡಿ.ಸಿ.ಬಾಲಚಂದ್ರ, ರಾಮಚಂದ್ರ ಮಾಸ್ತರ್ ಕೇನಾಜೆ, ಗ್ರಾ.ಪಂ.ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಗ್ರಾ.ಪಂ.ಮಾಜಿ ಅಧ್ಯಕ್ಷೆ ವಿನುತ ಪಾತಿಕಲ್ಲು, ಮಲೆನಾಡು ಹಿತರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಕುಮಾರ್ ಶಿರಾಡಿ, ಕೃಷಿಕರಾದ ಪಿ.ಬಿ.ಪ್ರಭಾಕರ ರೈ, ಸುದರ್ಶನ ಪಾತಿಕಲ್ಲು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಶಾಸಕಿ ಭಾಗೀರಥಿ ಮುರುಳ್ಯ ಪ್ರತಿಭಟನಾ ಸ್ಥಳ ಶಾಸಕಿ ಭಾಗೀರಥಿ ಮುರುಳ್ಯ ಆಗಮಿಸಿ ಮನವಿ ಸ್ವೀಕರಿಸಿದರು. ಕಾಡಾನೆ ಹಾವಳಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಲು ಈಗಾಗಲೇ ಸರಕಾರವನ್ನು ಒತ್ತಾಯಿಸಲಾಗಿದೆ. ಸೋಲಾರ್ ಬೇಲಿ ನಿರ್ಮಾಣಕ್ಕೆ ಶೇ.100 ಸಹಾಯಧನ ನೀಡಬೇಕು ಸೇರಿ ವಿವಿಧ ಬೇಡಿಕೆಗಳನ್ನು ಕಳೆದ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲಾಗಿದೆ. ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಮತ್ತೊಮ್ಮೆ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.