ಉಡುಪಿ, ನ. 24 (DaijiworldNews/AK): ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನಡೆಯಲಿರುವ ಬೃಹತ್ ಗೀತೋತ್ಸವದ ನಿಮಿತ್ತ ನಡೆಯುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ನ. ೨೮ ರಂದು ಉಡುಪಿಗೆ ಅಗಮಿಸುತ್ತಿರುವ ಹಿನ್ನಲೆಯಲ್ಲಿ ನಗರದಲ್ಲಿ ಮಾರ್ಗ ಬದಲಾವಣೆ ಮತ್ತು ಸಂಚಾರ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ನವೆಂಬರ್ 28 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ವಾಹನ ನಿರ್ಬಂಧಗಳು ಮತ್ತು ಮಾರ್ಗ ಬದಲಾವಣೆ ಜಾರಿಯಲ್ಲಿರುತ್ತದೆ. ಆದಿ ಉಡುಪಿ - ಕರಾವಳಿ ಜಂಕ್ಷನ್ - ಬನ್ನಂಜೆ - ನಗರ ಬಸ್ ನಿಲ್ದಾಣ - ಕಲ್ಸಂಕ - ಶ್ರೀ ಕೃಷ್ಣ ಮಠವನ್ನು ಒಳಗೊಳ್ಳುವ ಮಾರ್ಗವು ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ಮುಚ್ಚಲ್ಪಡುತ್ತದೆ. ಕುಂದಾಪುರದಿಂದ ಬರುವ ವಾಹನಗಳು ಉಡುಪಿ ನಗರವನ್ನು ಪ್ರವೇಶಿಸಲು ಕರಾವಳಿ ಫ್ಲೈಓವರ್ - ಅಂಬಲಪಾಡಿ - ಬ್ರಹ್ಮಗಿರಿ - ಜೋಡುಕಟ್ಟೆ ಮೂಲಕ ಹೋಗಬೇಕಾಗುತ್ತದೆ.
ಮಣಿಪಾಲದಿಂದ ಬರುವ ವಾಹನಗಳು ಮತ್ತು ಬಸ್ಸುಗಳು ಶಾರದಾ ಕಲ್ಯಾಣ ಮಂಟಪ - ಬೀಡಿನಗುಡ್ಡೆ - ಮಿಷನ್ ಕಾಂಪೌಂಡ್ ಮೂಲಕ ಉಡುಪಿ ನಗರ ಪ್ರವೇಶಿಸಲು ಮಾರ್ಗ ಬದಲಾಯಿಸಬೇಕು.
ಮಂಗಳೂರಿನಿಂದ ಬರುವ ವಾಹನಗಳು ಕಿನ್ನಿಮುಲ್ಕಿ ಸ್ವಾಗತ ಗೋಪುರದ ಮೂಲಕ ನಗರವನ್ನು ಪ್ರವೇಶಿಸಿ ಜೋಡುಕಟ್ಟೆ ಮೂಲಕ ಸಾಗಬೇಕು. ಮಲ್ಪೆಯಿಂದ ಬರುವ ಎಲ್ಲಾ ವಾಹನಗಳು ಉಡುಪಿಗೆ ಪ್ರವೇಶಿಸಲು ಕುತ್ಪಾಡಿ - ಅಂಬಲಪಾಡಿ ಮೂಲಕ ಮಾರ್ಗ ಬದಲಾಯಿಸಬೇಕಾಗುತ್ತದೆ.
ಅಂಬಾಗಿಲು ಕಡೆಯಿಂದ ಬರುವ ವಾಹನಗಳನ್ನು ಗುಂಡಿಬೈಲ್-ದೊಡ್ಡನಗುಡ್ಡೆ-ಎಂಜಿಎಂ ಕಾಲೇಜು ಮಾರ್ಗವಾಗಿ ತಿರುಗಿಸಿ, ಶಾರದಾ ಕಲ್ಯಾಣ ಮಂಟಪ-ಬೀಡಿನಗುಡ್ಡೆ ರಸ್ತೆ ಮೂಲಕ ಉಡುಪಿ ನಗರ ಪ್ರವೇಶಿಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಅವರು ಈ ಆದೇಶ ಹೊರಡಿಸಿದ್ದಾರೆ.