ಮಂಗಳೂರು, ನ. 24 (DaijiworldNews/TA): ಅಲ್ಲಲ್ಲಿ ಮಾನವ-ಆನೆ ಸಂಘರ್ಷ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಆನೆ ಕಾರ್ಯಾಚರಣೆ ಪಡೆ(ಇಟಿಎಫ್-ಎಲಿಫೆಂಟ್ ಟಾಸ್ಕ್ ಫೋರ್ಸ್)ಯನ್ನೇ ಅಂತಿಮಗೊಳಿಸುವುದು ನಿಶ್ಚಯಗೊಂಡಿದೆ.

ಆನೆ ಕಾರ್ಯಪಡೆ ಹಾಗೂ ಆನೆ ಶಿಬಿರ ಈ ಎರಡು ಯೋಜನೆಗಳಿಗೂ ಅರಣ್ಯ ಇಲಾಖೆ ಪ್ರಸ್ತಾವ ಕಳುಹಿಸಿತ್ತು, ಆದರೆ ಆನೆ ಶಿಬಿರಕ್ಕೆ ದೊಡ್ಡ ಮೊತ್ತದ ಬಂಡವಾಳ ಬೇಕಾಗಬಹುದು ಅಲ್ಲದೆ ಈಗಿನ ಪ್ರಸ್ತಾವಿತ ಗುಂಡ್ಯ ಪ್ರದೇಶದಲ್ಲಿ ಜನರಿಂದ ವಿರೋಧವೂ ಇರುವ ಹಿನ್ನೆಲೆಯಲ್ಲಿ ಸುಳ್ಯ ಹಾಗೂ ಗುಂಡ್ಯಗಳನ್ನು ಕೇಂದ್ರವಾಗಿರಿಸಿಕೊಂಡು ಆನೆ ಕಾರ್ಯಪಡೆ ಸ್ಥಾಪನೆ ಶೀಘ್ರ ಅನುಮೋದನೆ ಪಡೆಯುವ ನಿರೀಕ್ಷೆ ಇದೆ.
ಪ್ರಸ್ತುತ ಇದು ಸಂಪುಟ ಅನುಮೋದನೆ ಪಡೆದಿದ್ದು, ಹಣಕಾಸು ಇಲಾಖೆಯ ಪರಿಶೀಲನೆ ಹಂತದಲ್ಲಿದೆ, ಮುಂಬರುವ ವಿಧಾನಸಭೆ ಅಧಿವೇಶನಕ್ಕೆ ಮೊದಲೇ ಅಂತಿಮ ಅನುಮೋದನೆ ಪಡೆಯುವ ಸಾಧ್ಯತೆಗಳಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.