ಕಾಸರಗೋಡು, ನ. 24 (DaijiworldNews/TA): ಗಡಿನಾಡು ಕಾಸರಗೋಡಿನ ಕನ್ನಡಿಗರ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿದಂತೆ, ಕೇರಳ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ಚೀಟಿಗಳಲ್ಲಿ (ರೇಷನ್ ಕಾರ್ಡ್) ಕನ್ನಡ ಭಾಷೆಯನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದೆ. ಕೇರಳ ಸರ್ಕಾರದಿಂದ ಬಂದಿರುವ ಈ ಮಹತ್ವದ ಆದೇಶವು ಗಡಿಭಾಗದ ಕನ್ನಡಿಗರಿಗೆ ದೊಡ್ಡ ಸಂತಸದ ಸಂಗತಿ.

ಈ ಸಂಬಂಧ, ಇತ್ತೀಚೆಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಮತ್ತು ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯ ಕಟ್ಟೆ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಕಾಸರಗೋಡು ಪ್ರದೇಶದಲ್ಲಿ ವಾಸಿಸುವ ಸಾವಿರಾರು ಕನ್ನಡಿಗರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು ಎಂಬ ಬೇಡಿಕೆಯನ್ನು ಅವರು ಮುಖ್ಯಮಂತ್ರಿಗೆ ಒತ್ತಾಯಪೂರ್ವಕವಾಗಿ ತಿಳಿಸಿದ್ದರು.
ಪ್ರಸ್ತುತ ಕಾಸರಗೋಡಿನಲ್ಲಿ ಮುದ್ರಿಸಲ್ಪಡುವ ಗುರುತಿನ ಚೀಟಿಗಳು ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಲಭ್ಯ. ಇದರಿಂದ ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರು ಹಲವು ಆಡಳಿತಾತ್ಮಕ ಅಡಚಣೆಗಳನ್ನು ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ, ರೇಷನ್ ಕಾರ್ಡ್ ಹಾಗೂ ಇತರೆ ಗುರುತಿನ ಚೀಟಿಗಳನ್ನು ಮುದ್ರಿಸುವಾಗ ಕನ್ನಡ ಭಾಷೆಯನ್ನೂ ಸೇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿರುವ ದತ್ತಾಂಶದ ಪ್ರಕಾರ, ಕೇರಳ ಸರ್ಕಾರದ ಈ ಆದೇಶ ಜಾರಿಗೊಂಡ ಬಳಿಕ ಕಾಸರಗೋಡಿನ ಕನ್ನಡಿಗರ ನಿತ್ಯ ಜೀವನ ಸುಗಮವಾಗುವ ನಿರೀಕ್ಷೆ ಇದೆ. ಅಧಿಕೃತ ದಾಖಲೆಗಳಲ್ಲಿ ಕನ್ನಡ ಅಳವಡಿಕೆ, ಭಾಷಾ ಹಕ್ಕು ಮತ್ತು ಸಾಂಸ್ಕೃತಿಕ ಗುರುತಿನ ರಕ್ಷಣೆಯತ್ತ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ಕಾಸರಗೋಡು ಕನ್ನಡಿಗರ ಹಕ್ಕುಗಳ ಪರ ಹೋರಾಟದಲ್ಲಿ ಇದು ಒಂದು ಮಹತ್ವದ ಗೆಲುವು ಎಂದು ಗಡಿಭಾಗದ ಜನತೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.