ಬಂಟ್ವಾಳ, ,ನ. 23 (DaijiworldNews/AK): ಸಮಾಜಕ್ಕೆ ಒಳಿತಾಗುವ ಯಾವುದೇ ಕಾರ್ಯಕ್ರಮ ನಡೆಸಲು ಮುಂದಾದಾಗ ನಾಗರಿಕ ಸಮಾಜವೇ ಕೈ ಹಿಡಿದು ಮುನ್ನಡೆಸುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಹೇಳಿದ್ದಾರೆ.

ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಪ್ರಪ್ರಥಮ ಬಾರಿಗೆ ಬಂಟ್ವಾಳ ಫಸ್ಟ್ ಇದರ ವತಿಯಿಂದ 1 ತಿಂಗಳ ಕಾಲ ನಡೆಯುವ ಬೃಹತ್ ಗ್ರಾಹಕರ ಮೇಳ, ಅಮ್ಯೂಸ್ ಮೆಂಟ್ ಪಾರ್ಕ್, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನ ಬಂಟ್ವಾಳ ಉತ್ಸವ'ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯ, ಕಲೆ, ರಾಜಕೀಯ, ಸಂಸ್ಕೃತಿ ಸಹಿತ ಎಲ್ಲಾ ರಂಗದಲ್ಲೂ ಮುಂಚೂಣಿಯಲ್ಲಿರುವ ಬಂಟ್ವಾಳ ಜಿಲ್ಲೆಗೆ ಮಾತ್ರವಲ್ಲ ರಾಜ್ಯಕ್ಕೆ ಮಾದರಿ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ರಾಜಕೀಯರಹಿತ ವಾಗಿ ನಡೆದಾಗ ಅದು ಸಮಾಜದ ಸ್ವಾಸ್ಥ್ಯಕ್ಕೂ ಪೂರಕ ಎಂದರು.
ಉತ್ಸವ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ, ಬಂಟ್ವಾಳ ಉತ್ಸವದ ಹೆಸರಿನಲ್ಲಿ ಬಿ.ಸಿ.ರೋಡು ಜಂಕ್ಷನ್ನಲ್ಲಿ ನಡೆಯುವ ಈ ಒಂದು ಕಾರ್ಯಕ್ರಮದಿಂದ ಪರಿಸರದ ಜನರಿಗೆ ಹಬ್ಬದ ವಾತಾವರಣ ಸೃಷ್ಟಿಸಲಿದ್ದು ಇದು ಯಶಸ್ವಿಯಾಗಿ ನಡೆಯಲಿ ಎಂದರು.
ಬಂಟ್ವಾಳ ತುಳು ಕೂಟದ ಅಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಪುರಸಭಾಧ್ಯಕ್ಷ ಬಿ. ವಾಸು ಪೂಜಾರಿ ಲೊರೆಟ್ಟೋ, ಮೂಡೂರು-ಪಡೂರು ಜೋಡುಕರೆ ಬಯಲು ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪುರಸಭಾ ಉಪಾಧ್ಯಕ್ಷ ಮೂನಿಶ್ ಅಲಿ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಗಾಣಿಗ ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ, ನ್ಯಾಯವಾದಿ ಉಮೇಶ್ ಕುಮಾರ್ ವೈ., ಉದ್ಯಮಿ ಹಂಝ ಬಸ್ತಿಕೋಡಿ, ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ಜಿಲ್ಲಾ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಪುರಸಭಾ ನಾಮನಿರ್ದೇಶಿತ ಸದಸ್ಯ ಜಗದೀಶ್ ಕುಂದರ್ ಭಂಡಾರಿಬೆಟ್ಟು, ಶಿಕ್ಷಕಿ ಜ್ಯೋತಿ ಮಾರ್ಟಿನ್ ಅತಿಥಿಗಳಾಗಿದ್ದರು.
ಸಹಾಯಧನ ವಿತರಣೆ
ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್ ಸಂಜೆ ವೇಳೆ ಭೇಟಿ ನೀಡಿ ಶುಭ ಹಾರೈಸಿ ದರು. ಇದೇ ವೇಳೆ ಐವರು ಅಶಕ್ತರಿಗೆ ಸಹಾಯಧನ ವಿತರಿಸಲಾಯಿತು. ಉತ್ಸವ ವ್ಯವಸ್ಥಾಪಕ ಮಹಮ್ಮದ್ ನಂದಾವರ, ನವೀನ್ ಕುಮಾರ್, ಶಿವಪ್ರಸಾದ್ ಬಂಟ್ವಾಳ, ವಿಶ್ವನಾಥ ಕೊಟ್ಟಾರಿ ಸಜಿಪ, ಇಂಡಿಯನ್ ಅಮ್ಯೂಸ್ ಮೆಂಟ್ ಇದರ ನಾಸಿರ್ ಕಾವಳಕಟ್ಟೆ ಮತ್ತಿತರರಿದ್ದರು.
ಸೌಮ್ಯ ಯಶವಂತ ಭಂಡಾರಬೆಟ್ಟು ಸ್ವಾಗತಿಸಿ, ಇಬ್ರಾಹಿಂ ಕೈಲಾರ್ ವಂದಿಸಿ ದರು. ಶ್ರೀಶ ವಾಸವಿ ನಿರೂಪಿಸಿದರು.