ಮಂಗಳೂರು/ಉಡುಪಿ, ನ. 23 (DaijiworldNews/AA): ನವೆಂಬರ್ 22ರ ರಾತ್ರಿ ದಕ್ಷಿಣ ಕನ್ನಡದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ತೀವ್ರ ಗುಡುಗು-ಮಿಂಚಿನಿಂದಾಗಿ ಮಂಗಳೂರು ನಗರದಲ್ಲಿ ಮುನ್ನೆಚ್ಚರಿಕೆ ಘೋಷಿಸಲಾಗಿತ್ತು. ಮಳೆಯಿಂದಾಗಿ ಬಜ್ಪೆ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದೆ.

ರಾತ್ರಿ 10 ರಿಂದ 11 ಗಂಟೆಯ ನಡುವೆ ಮಂಗಳೂರಿನಲ್ಲಿ ಗುಡುಗು-ಮಿಂಚು ಸಹಿತ ಭಾರೀ ಮಳೆ ಸುರಿದಿದೆ. ಮುಂಬೈ ಮತ್ತು ಬೆಂಗಳೂರಿನಿಂದ ಆಗಮಿಸಬೇಕಿದ್ದ ವಿಮಾನಗಳನ್ನು ಮತ್ತೆ ಬೆಂಗಳೂರಿಗೆ ತಿರುಗಿಸಲಾಯಿತು. ದುಬೈಗೆ ಹೊರಡಬೇಕಿದ್ದ ವಿಮಾನವನ್ನು ಕಣ್ಣೂರಿಗೆ ತಿರುಗಿಸಲಾಗಿದ್ದು, ಅಲ್ಲಿ ಅದು ಸುರಕ್ಷಿತವಾಗಿ ಇಳಿದಿದೆ.
ದಕ್ಷಿಣ ಕನ್ನಡದ ಬಹುತೇಕ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ವಿಟ್ಲ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಕಡಬ ಮತ್ತು ಮುಲ್ಕಿಯಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗಿದೆ. ಪುತ್ತೂರು ತಾಲೂಕಿನ ಸಾವಣೂರು ಮತ್ತು ಪೆರುವಾಯಿಯಲ್ಲಿ ನಿರಂತರ ಮಳೆಯಾದರೆ, ಬೆಟ್ಟಂಪಾಡಿ, ಪಾಣಾಜೆ ಮತ್ತು ಕಲ್ಮಡ್ಕದಲ್ಲಿ ತೀವ್ರ ಮಿಂಚು ಸಹಿತ ಮಳೆಯಾಗಿದೆ.
ಉಪ್ಪಿನಂಗಡಿ ಭಾಗದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಮಳೆಯಾಗಿದ್ದು, ಅಂಗಳದಲ್ಲಿ ಒಣಗಲು ಹಾಕಿದ್ದ ಅಡಕೆಗೆ ನೀರು ನಿಂತಿದೆ. ಉಡುಪಿ ಜಿಲ್ಲೆಯಲ್ಲೂ ರಾತ್ರಿ 11 ಗಂಟೆಯ ನಂತರ ಮಳೆ ಆರಂಭವಾಗಿದ್ದು, ಪಡುಬಿದ್ರಿ, ಉಚ್ಚಿಲ, ಕಾಪು ಮತ್ತು ಉಡುಪಿ ಪಟ್ಟಣದಲ್ಲಿ ಸಾಧಾರಣ ಮಳೆಯಾಗಿದೆ. ಕಾಸರಗೋಡು ಸಹ ಸಾಧಾರಣ ಮಳೆಯನ್ನು ವರದಿ ಮಾಡಿದೆ.