ಪುತ್ತೂರು,ನ. 19 (DaijiworldNews/AK): ಕಳೆದುಹೋದ ಪುತ್ತೂರನ್ನು ಮತ್ತೆ ಬಿಜೆಪಿ ತೆಕ್ಕೆಗೆ ತರಲು ಇದೊಂದು ವೇದಿಕೆ ಆಗಲಿ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.

ಅಟಲ್ ಬಿಹಾರಿ ವಾಜಪೇಯಿ ಅವರ ನೂರನೇ ಜನ್ಮದಿನದ ಅಂಗವಾಗಿ ಇಂದು ಏರ್ಪಡಿಸಿದ್ದ ‘ಅಟಲ್ ವಿರಾಸತ್' ಬೃಹತ್ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, 1991ರಲ್ಲಿ ಸುಳ್ಯ, ಬೆಳ್ತಂಗಡಿ, ಪುತ್ತೂರಿನ ಚುನಾವಣಾ ಪ್ರಚಾರ ಕಾರ್ಯಕ್ಕೆ ವಾಜಪೇಯಿ ಅವರು ಬಂದಿದ್ದರು ಎಂದು ನೆನಪಿಸಿದರು.
ಕಾರ್ಯಕರ್ತರನ್ನು ತಲುಪಲು ಆಗದ ಜಾಗದಲ್ಲಿ ನನ್ನನ್ನು ಕೂರಿಸಬೇಡ ಎಂದು ಅಟಲ್ಜೀ ಅವರು ಹೇಳುತ್ತಿದ್ದರು ಎಂದು ವಿವರಿಸಿದರು. ಎಲ್ಲರೂ ಒಗ್ಗೂಡಿ, ತಮ್ಮ ಹುದ್ದೆಯನ್ನು ಮರೆತು ಕೆಲಸ ಮಾಡಬೇಕು ಎಂಬ ಅವರ ಮಾತು ಪುತ್ತೂರಿಗೆ ಹತ್ತಿರದ ಸಂದೇಶ ಎಂದು ನುಡಿದರು. ಕಳೆದುಹೋದ ಪುತ್ತೂರನ್ನು ಮತ್ತೆ ಬಿಜೆಪಿ ತೆಕ್ಕೆಗೆ ತರಲು ಇದೊಂದು ವೇದಿಕೆ ಆಗಲಿ ಎಂದು ಹೇಳಿದರು.
ದೂರದೃಷ್ಟಿ, ಸಮರ್ಪಕ ಯೋಚನೆ, ಯೋಜನೆ, ಯಶಸ್ವಿ ಅನುಷ್ಠಾನವೇ ಅವರ ಚಿಂತನೆಗಳು ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮದ ಜಿಲ್ಲಾ ಸಂಚಾಲಕ ಕಿಶೋರ್ ಕುಮಾರ್ ಪುತ್ತೂರು ಅವರು ಪ್ರಾಸ್ತಾವಿಕ ಮಾತನಾಡಿದರು. ಸೇವಾ ಪ್ರವೃತ್ತಿಯ ಹಿಂದೂ ನಾಯಕ ಡಾ.ಎಂ.ಕೆ.ಪ್ರಸಾದ್, ಆರೆಸ್ಸೆಸ್ ಹಾಗೂ ಜನಸಂಘ, ಬಿಜೆಪಿಯ ಪೋಷಕರಾದ ಡಾ. ಗೌರಿ ಪೈ ಅವರನ್ನು ಸನ್ಮಾನಿಸಲಾಯಿತು.