ಪುತ್ತೂರು, ನ. 19 (DaijiworldNews/AK):ಅಟಲ್ ಜೀ ಎಂಬುದು ಪ್ರೇರಕ ಶಕ್ತಿ. ಅವರೊಬ್ಬ ಕವಿಹೃದಯಿ, ಬರಹಗಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಅಭಿಪ್ರಾಯಪಟ್ಟರು.

ಪುತ್ತೂರಿನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೂರನೇ ಜನ್ಮದಿನದ ಅಂಗವಾಗಿ ಇಂದು ಏರ್ಪಡಿಸಿದ್ದ ‘ಅಟಲ್ ವಿರಾಸತ್' ಬೃಹತ್ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.ಅಲ್ಲದೇ ಪುತ್ತೂರಿನ ಪದಾಧಿಕಾರಿಗಳಿಂದ ಅವರು ಗೌರವ ಸ್ವೀಕರಿಸಿದರು. ಪುತ್ತೂರಿನ ಬಿಜೆಪಿ ಮಾಜಿ ಅಧ್ಯಕ್ಷರು, ಹಾಲಿ ಅಧ್ಯಕ್ಷರು ಈ ಗೌರವಾರ್ಪಣೆ ನೆರವೇರಿಸಿದರು.
ಅವರು ಅಜಾತಶತ್ರು, ಮಾತ್ರವಲ್ಲ; ಅವರೊಬ್ಬ ಅಪ್ಪಟ ದೇಶಭಕ್ತ ಎಂದು ನೆನಪು ಮಾಡಿದರು.
ಅಟಲ್ಜೀ ಅವರು ಕಟ್ಟಿದ ಬಿಜೆಪಿ ಕಾರ್ಯಕರ್ತರಾಗಿರುವುದೇ ನಮಗೆಲ್ಲರಿಗೂ ಹೆಮ್ಮೆ ಮತ್ತು ಸ್ಫೂರ್ತಿ ಎಂದರು. ಕರಾವಳಿಯು ನಮ್ಮ ಸಂಘಟನೆಗೆ ರಾಜ್ಯಕ್ಕೆ ಒಂದು ಶಕ್ತಿಯನ್ನು ನೀಡಿದೆ ಎಂದು ಮೆಚ್ಚುಗೆ ಸೂಚಿಸಿದರು. ಪೂಜ್ಯ ತಂದೆಯವರಾದ ಯಡಿಯೂರಪ್ಪ ಅವರ ರಾಜಕೀಯ ಏಳುಬೀಳುಗಳನ್ನು ಗಮನಿಸಿದ್ದೇನೆ. ಅವರು ದಕ್ಷಿಣ ಕನ್ನಡದ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ನೆನಪಿಸಿಕೊಂಡರು.
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 103 ವರ್ಷದ ತಾಯಿ ಬಿಜೆಪಿಗೆ ಮತ್ತು ನನಗೆ ಆಶೀರ್ವಾದ ಮಾಡಿದ್ದಾರೆ. ಪುತ್ತೂರಿನ ಕರ್ಮಭೂಮಿ, ಪುಣ್ಯಭೂಮಿಯಲ್ಲಿ ದೇಶದ ಶ್ರದ್ಧೆ, ಸಂಘಟನೆಯ ಶ್ರದ್ಧೆ ಇದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಸೌಭಾಗ್ಯ ಎಂದು ಹೇಳಿದರು. ವಾಜಪೇಯಿ ಅವರು ಹಲವಾರು ಬಾರಿ ಕರ್ನಾಟಕ, ದಕ್ಷಿಣ ಕನ್ನಡಕ್ಕೆ ಬಂದು ಹೋಗಿದ್ದಾರೆ. ಅದರು ಇಲ್ಲಿನ ಕಾರ್ಯಕರ್ತರ ಸಂಘಟನಾ ಶಕ್ತಿಯನ್ನು ಗುರುತಿಸಿದ್ದರು. ಕರ್ನಾಟಕವು ದಕ್ಷಿಣ ಭಾರತದ ಹೆಬ್ಬಾಗಿಲು ಆಗಲಿದೆ ಎಂದು ಅವರು ತಿಳಿಸಿದ್ದರು ಎಂದು ಹೇಳಿದರು.
ಅಟಲ್ಜೀ ಅವರು ಸಾಮಾನ್ಯ ಕಾರ್ಯಕರ್ತರನ್ನೂ ಗೌರವದಿಂದಲೇ ಕಾಣುತ್ತಿದ್ದರು ಎಂದರು.
ಬಿಜೆಪಿಗೆ ಶಕ್ತಿ ತುಂಬುವ ಕೆಲಸ ಆಗಬೇಕು. ನಾಯಕರೆಲ್ಲ ಒಟ್ಟಾಗಿ, ಒಂದಾಗಿ ಸಂಘಟನೆ ಮಾಡಬೇಕೆಂಬ ಆಶಯ ಕಾರ್ಯಕರ್ತರಲ್ಲಿದೆ. ಬಿಜೆಪಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವಲ್ಲಿ ಪುತ್ತೂರಿನಲ್ಲಿ ನಾವು ಗೆಲುವು ಸಾಧಿಸಬೇಕಿದೆ ಎಂದು ತಿಳಿಸಿದರು. ಆಗ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪೊಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿನ ಆಡಳಿತ ವೈಖರಿಯಿಂದ ಬಡವರು, ರೈತರು, ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷ ಬಡವರು, ರೈತರನ್ನೂ ಮರೆತಿದೆ. ಹಿಂದೂ ಕಾರ್ಯಕರ್ತರ ಮೇಲೆ ಅಟ್ಟಹಾಸ ಮೆರೆಯಲಾಗುತ್ತಿದೆ ಎಂದು ಟೀಕಿಸಿದರು. ಬಡವರ ವಿರೋಧಿ, ರೈತ ವಿರೋಧಿ, ಹಿಂದೂ ವಿರೋಧಿ ಕಾಂಗ್ರೆಸ್ ಪಕ್ಷವನ್ನು ಬುಡಸಮೇತ ಕಿತ್ತು ಹಾಕುವ ಸಂಕಲ್ಪ ನಮ್ಮದಾಗಲಿ ಎಂದು ತಿಳಿಸಿದರು.