ಸುಳ್ಯ , ನ. 19 (DaijiworldNews/AK): ಸುಳ್ಯ ದಲ್ಲಿ ಬೆನಿಫಿಟ್ ಸ್ಕೀಂ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚಿಸಿದ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಕಸಬಾ ಗ್ರಾಮದ ವಿವೇಕಾನಂದ ಸರ್ಕಲ್ ಬಳಿ ಅಂಬಡೆಡ್ಕ ಎಂಬಲ್ಲಿ ತತ್ವಮಸಿ ಚಾರಿಟೇಬಲ್ ಟ್ರಸ್ಟ್(ರಿ) ಮತ್ತು ತತ್ವಮಸಿ ಎಂಟರ್ ಪ್ರೈಸಸ್ (ರಿ) ಎಂಬ ಹೆಸರಿನಲ್ಲಿ ಸಂಸ್ಥೆ ಹೆಸರಿನಲ್ಲಿ ಬೆನಿಫಿಟ್ ಸ್ಕೀಂ ಪ್ರಾರಂಭಿಸಿ, ಏಜೆಂಟರುಗಳ ಮೂಲಕ ಸಾರ್ವಜನಿಕರಿಂದ ಕಂತುಗಳ ಮೂಲಕ ಹಣಸಂಗ್ರಹ ಮಾಡಿ, 4115 ಸದಸ್ಯರನ್ನು ಸೇರಿಸಿಕೊಂಡು ಅವರಿಂದ ಕೋಟ್ಯಾಂತರ ಹಂವನ್ನು ಸಂಗ್ರಹಿಸಿದ್ದರು. ಆ ಹಣವನ್ನಾಗಲೀ ಯಾವುದೇ ವಸ್ತುವನ್ನಾಗಾಲಿ ನೀಡದೆ 3,08,62,500 ರೂ (ಮೂರು ಕೋಟಿ ಎಂಟು ಲಕ್ಷದ ಅರವತ್ತೇರಡು ಸಾವಿರದ ಐನೂರು ) ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.
ವಂಚನೆಗೆ ಸಂಬಂಧಿಸಿದಂತೆ, ಆರೋಪಿಗಳಾದ ಶಿವಪ್ರಕಾಶ್, ಕೆ.ಪಿ. ಗಣೇಶ್, ಕೆ.ಪಿ. ಕೃಷ್ಣಪ್ಪ ಗೌಡ, ಗೀತಾ ಕೆ.ಎಸ್., ಭಾರತಿ, ಗೀತಾ ಗಣೇಶ್, ಎನ್.ಇ. ವೈ. ಕಮಲಾಕ್ಷ, ಕೆ. ನಾಗೇಶ ಎಂಬವರುಗಳ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಕ್ರ: 248/2014 ಪ್ರಕರಣದ ತನಿಖೆ ನಡೆಸಿದ ಆಗಿನ ಸುಳ್ಯ ಪೊಲೀಸ್ ಠಾಣಾಧಿಕಾರಿಗಳಾದ ಬ್ರಿಜೇಶ್ ಮಥ್ಯೂರವರು ಪ್ರಕರಣದ ಭಾಗಶಃ ತನಿಖೆಯನ್ನು ನಡೆಸಿದ್ದು, ಚಂದ್ರಶೇಖರ್ ಹೆಚ್ ವಿ ರವರು ತನಿಖೆಯನ್ನು ಪೂರ್ಣಗೊಳಿಸಿ ಮಾನ್ಯ ಎಸ್ ಸಿ ಜೆ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು
ಪ್ರಕರಣದ ವಿಚಾರಣೆಯು ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಬಿ. ಮೋಹನ್ ಬಾಬು ರವರ ಸಮಕ್ಷಮ ನಡೆದು ಅ. 30 ರಂದು ಈ ಆರೋಪಿಗಳಲ್ಲಿ ಕೆ.ಪಿ ಗಣೇಶ್, ಗೀತಾ ಮತ್ತು ಭಾರತಿ ಅವರುಗಳ ಅಪರಾಧ ಸಾಬೀತಾಗಿ ದೋಷಿ ಎಂದು ತೀರ್ಮಾನಿಸಲಾಗಿದೆ. ಆರೋಪಿಗಳಿಗೆ ಕಲಂ 406 ಸಹವಾಚಕ 149 ರಡಿಯಲ್ಲಿ 3 ವರ್ಷಗಳ ಸಾದಾ ಕಾರಾಗೃಹ ವಾಸ, ಮತ್ತು 10,000 ರೂ. ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 6 ತಿಂಗಳ ಹೆಚ್ಚುವರಿ ಸಾದಾ ಕಾರಾಗೃಹ ವಾಸ ವಿಧಿಸಲಾಗಿದೆ. ಈ ಮೇಲಿನ ಎಲ್ಲಾ ಶಿಕ್ಷೆಗಳು ಏಕಕಾಲಕ್ಕೆ ಜಾರಿಗೊಳಿಸುವಂತೆ ಆದೇಶಿಸಲಾಗಿದೆ.
ಉಳಿದ ಆರೋಪಿಗಳಾದ ಕೆ.ಪಿ ಕೃಷ್ಣಪ್ಪ ಗೌಡ, ಗೀತಾ ಗಣೇಶ,ಎನ್.ಇ. ವೈ. ಕಮಲಾಕ್ಷ ಕೆ. ನಾಗೇಶ್ ಅವರ ಅಪರಾಧ ಸಾಬೀತಾಗದೆ ಅವರುಗಳನ್ನು ಬಿಡುಗಡೆ ಮಾಡಿ ತೀರ್ಪು ನೀಡಿದ್ದಾರೆ. 1ನೇ ಆರೋಪಿಯು ಮರಣ ಹೊಂದಿರುವುದರಿಂದ ಅವರ ಮೇಲಿನ ಪ್ರಕರಣ ಸ್ಥಗಿತಗೊಳಿಸಲಾಗಿರುತ್ತದೆ. ಸರಕಾರದ ಪರ ಸಹಾಯಕ ಸರ್ಕಾರಿ ಅಭಿಯೋಜಕ ರಮೇಶ್ ಅವರು ವಾದ ಮಂಡಿಸಿದ್ದರು.