ಮಂಗಳೂರು/ಉಡುಪಿ, ನ. 19 (DaijiworldNews/AA): ಐಷಾರಾಮಿ ಕಾರು ನೋಂದಣಿಯ ವೇಳೆ ತೆರಿಗೆ ವಂಚನೆಗೆ ಸಂಬಂಧಿಸಿದ ಪ್ರಕರಣದಲ್ಲಿ, ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಮಂಗಳೂರು ಮತ್ತು ಉಡುಪಿ ಆರ್.ಟಿ.ಓ ಕಚೇರಿಗಳಲ್ಲಿ ಕಡತಗಳ ಪರಿಶೀಲನೆ ನಡೆಸಿದ್ದಾರೆ.

ಉಡುಪಿ ಆರ್.ಟಿ.ಓ. ಕಚೇರಿಯಲ್ಲಿ ತೆರಿಗೆ ಮೊತ್ತವನ್ನು ಕಡಿಮೆ ಮಾಡಿ ಒಂದು ಬಿಎಂಡಬ್ಲ್ಯು ಕಾರನ್ನು ನೋಂದಣಿ ಮಾಡಲಾಗಿದೆ. ಇದರಿಂದ ಸರ್ಕಾರಕ್ಕೆ ಸುಮಾರು 85 ಲಕ್ಷ ರೂ.ಗಳಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಈಗಾಗಲೇ ಪ್ರಕರಣ ದಾಖಲಾಗಿದೆ.
ವಾಹನದ ನೋಂದಣಿಗೆ ಸಂಬಂಧಿಸಿದ ಕೆಲವೊಂದು ಪ್ರಕ್ರಿಯೆಗಳು ಮಂಗಳೂರು ಆರ್.ಟಿ.ಓ. ಕಚೇರಿಯಲ್ಲೂ ನಡೆದಿರುವ ಕಾರಣ, ಲೋಕಾಯುಕ್ತ ಅಧಿಕಾರಿಗಳು ಎರಡೂ ಕಡೆಗಳ ಕಡತಗಳನ್ನು ಪರಿಶೀಲಿಸಿದ್ದಾರೆ.
ಪರಿಶೀಲನೆಯ ವೇಳೆ ಹಲವಾರು ವಿವರಗಳು ಬೆಳಕಿಗೆ ಬಂದಿದ್ದು, ಈ ಬಗ್ಗೆ ಕೇಂದ್ರ ಕಚೇರಿಗೆ ವರದಿ ಸಲ್ಲಿಸಲಾಗುವುದು. ಅಲ್ಲಿಂದ ಬರುವ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಪ್ರಭಾರ ಅಧೀಕ್ಷಕ ಕುಮಾರ ಚಂದ್ರ ಅವರು ತಿಳಿಸಿದ್ದಾರೆ.