ಸುಳ್ಯ, ನ. 18 (DaijiworldNews/AK):ಗ್ರಾಮ ಮಟ್ಟದಲ್ಲಿ ಸಾಹಿತ್ಯ ಕಾರ್ಯಕ್ರಮಗಳು ನಡೆದ್ದಾಗ ಸಾಹಿತ್ಯ ಸಮ್ಮೇಳನಗಳ ವಿಸ್ತಾರಣಾ ರೂಪ ಫಲಶ್ರುತಿ ಹೆಚ್ಚುತ್ತದೆ ಎಂದು ಬೆಳ್ತಂಗಡಿ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯ ಗುರುಗಳಾದ ರಾಮಕೃಷ್ಣ ಭಟ್ ಚೊಕ್ಕಾಡಿ ಹೇಳಿದರು.

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಪಂಜ ಹೋಬಳಿ ಘಟಕ ಸಾಹಿತ್ಯ ಸಮ್ಮೇಳನ ಸಂಘಟನಾ ಸಮಿತಿ ಆಶ್ರಯದಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವಠಾರದ ಸರೋಜಿನಿ ಗಂಗಯ್ಯ ಮುಳುಗಾಡು ವೇದಿಕೆ,ಯು.ಸು ಗೌಡ ಸಭಾಂಗಣದಲ್ಲಿ ನಡೆದ ಪಂಜ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಹಾಗೂ ಸಿರಿಗನ್ನಡ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಸಮರೋಪ ಭಾಷಣ ಮಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಇಂದು ಆಂತರಿಕ ವಿಕಾಸ ಇಲ್ಲ.ಸಂವೇದನಾಶೀಲತೆಗೆ ಬೆಲೆ ಇಲ್ಲ.ಆಂತರಿಕ ಅವಲೋಕನಕ್ಕೆ ಅವಕಾಶ ಇಲ್ಲ.ಆಂತರಿಕ ವಿಕಾಸ ಇಲ್ಲದ ಶಿಕ್ಷಣ ಶಿಕ್ಷಣವಾಗುವುದು ಹೇಗೆ? ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರು ಮಾಡುವುದೇ ಇಂದಿನ ಶಿಕ್ಷಣ ಆಗಿದೆ. ಶಿಕ್ಷಣ ಕ್ಷೇತ್ರ ಈಗ ಹಾಳಾಗಿದೆ.ಇದನ್ನು ನಮ್ಮ ಆಡಳಿತಗಾರರು ಹಾಳು ಮಾಡಿದ್ದಾರೆ. ಆಂತರಿಕ ಅವಲೋಕನಕ್ಕೆ ಸಾಹಿತ್ಯ ಬೇಕು. ಸಾಹಿತ್ಯ ಸಮ್ಮೇಳನಗಳಿಗೆ ದುಂದು ವೆಚ್ಚ ಮಾಡಬಾರದು. ಸಂಭಾವನೆ ಕೇಳುವ ಸಾಹಿತಿಗಳನ್ನು ಸಾಹಿತ್ಯ ಸಮ್ಮೇಳನಕ್ಕೆ ಕರೆಯಬಾರದು. ಸಾಹಿತ್ಯ ಸಮ್ಮೇಳನಗಳಿಗೆ ಮೊದಲು ಅನುದಾನ ಬರುತ್ತಿತ್ತು. ಈಗ ಅನುದಾನ ಬಾರದೆ ಸಾಹಿತ್ಯಕ್ಕೆ ಯಾವುದೇ ಗ್ಯಾರಂಟಿ ಇಲ್ಲದಾಗಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ| ಎಂ.ಪಿ ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷರಾದ ಎ.ಕೆ ಹಿಮಕರ ಅವರು ಸಮ್ಮೇಳನಾಧ್ಯಕ್ಷರ ನುಡಿಯನ್ನು ನುಡಿದರು.