ಮಂಗಳೂರು, ನ. 18 (DaijiworldNews/AA): ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ವಾಟ್ಸಾಪ್ ಸಂಖ್ಯೆಯನ್ನು ನವೆಂಬರ್ 17ರ ಮಧ್ಯಾಹ್ನ ಹ್ಯಾಕ್ ಮಾಡಲಾಗಿದೆ. ವಂಚಕರು ಅವರ ಪ್ರೊಫೈಲ್ ಬಳಸಿಕೊಂಡು ಹಲವಾರು ಮಂದಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಬಾವಾ ಅವರಿಗೆ ಪರಿಚಯವಿರುವ ಪತ್ರಕರ್ತರು, ಪೊಲೀಸ್ ಅಧಿಕಾರಿಗಳು ಮತ್ತು ಇತರರಿಗೆ ಅವರ ಸಂಖ್ಯೆಯಿಂದ ತುರ್ತು ಆರ್ಥಿಕ ಸಹಾಯಕ್ಕಾಗಿ ಸಂದೇಶಗಳನ್ನು ಕಳುಸಲಾಗಿದೆ. ಹ್ಯಾಕರ್ಗಳು "ನನಗೆ ನಿಮ್ಮ ಸಹಾಯ ಬೇಕು" ಎಂಬ ಸಂದೇಶವನ್ನು ಕಳುಹಿಸಿದ್ದಾರೆ.
"ಏನಾಯಿತು, ಬಾವಾ?" ಎಂದು ಕೆಲವರು ಪ್ರತಿಕ್ರಿಯಿಸಿದಾಗ, ಹ್ಯಾಕರ್ಗಳು ಇಂಗ್ಲಿಷ್ನಲ್ಲಿ ವಿಸ್ತೃತ ಕಥೆಗಳನ್ನು ಕಳುಹಿಸಿ, ನಂತರ ಬೇರೊಂದು ಯುಪಿಐ ಐಡಿಗೆ ಹಣವನ್ನು ವರ್ಗಾಯಿಸುವಂತೆ ವಿನಂತಿಸಿದ್ದಾರೆ. ಹಣ ಪಾವತಿಸಿದ ನಂತರ ಅದರ ಸ್ಕ್ರೀನ್ಶಾಟ್ ಕಳುಹಿಸುವಂತೆ ಸಹ ಅವರು ಬೇಡಿಕೆ ಇಟ್ಟಿದ್ದಾರೆ.
ಬಾವಾ ಅವರ ನಂಬರ್ ನಿಂದ ಸಂದೇಶಗಳನ್ನು ಸ್ವೀಕರಿಸಿದ ಕೆಲವರು ನೇರವಾಗಿ ಬಾವಾ ಅವರಿಗೆ ಕರೆ ಮಾಡಿ ಸತ್ಯವನ್ನು ಪರಿಶೀಲಿಸಿದ್ದಾರೆ. ಈ ವಿಚಾರ ತಿಳಿದು ದಿಗ್ಭ್ರಮೆಗೊಂಡ ಮಾಜಿ ಶಾಸಕರು, ತಮ್ಮ ವಾಟ್ಸಾಪ್ ಸಂಖ್ಯೆ ನಿಜವಾಗಿಯೂ ಹ್ಯಾಕ್ ಆಗಿರುವುದು ಮನಗಂಡಿದ್ದಾರೆ.