ಮಂಗಳೂರು, ನ. 18 (DaijiworldNews/AA): ದಸರಾ ಹಬ್ಬದ ವೇಳೆ ಹುಲಿ ವೇಷ ತೊಟ್ಟು ಮೂರುವರೆ ವರ್ಷದ ಪುಟ್ಟ ಬಾಲಕ ಆರವ್ ಜಿ ಕದ್ರಿ ಸಂಗ್ರಹಿಸಿದ ಹಣವನ್ನು ಆರ್ಥಿಕ ಸಂಕಷ್ಟದಲ್ಲಿರುವ ಎರಡು ಬಡ ಕುಟುಂಬಗಳಿಗೆ ನೀಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.




ಕದ್ರಿ ಕ್ರಿಕೆಟರ್ಸ್ ಕ್ಲಬ್ ರಿಜಿಸ್ಟರ್ ಅಧ್ಯಕ್ಷ ಗೌರವ್ ಜೆ ಕದ್ರಿ, ಅಕಿಲ ಗೌರವ್ ದಂಪತಿಗಳ ಪುತ್ರ ಆರವ್ ಜಿ ಕದ್ರಿ, ಯುವ ಸಂಗಮ ಕುದ್ರೋಳಿ ರಿ ತಂಡದ ಜೊತೆ ಹುಲಿ ವೇಷ ತೊಟ್ಟು ಈ ವೇಳೆ ಬಂದಿದ್ದ ನೋಟಿನ ಹಾರದ ಹಣವನ್ನು, ಎರಡು ಬಡ ಕುಟುಂಬಗಳಿಗೆ ನೀಡಿದ್ದಾರೆ. ಆರ್ಥಿಕ ನೆರವು ಹಸ್ತಾಂತರ ಕಾರ್ಯಕ್ರಮ ಮಂಗಳೂರಿನ ಕದ್ರಿ ಮೈದಾನದಲ್ಲಿ ಕದ್ರಿ ಕ್ರಿಕೆಟರ್ಸ್ ಕ್ಲಬ್ ರಿಜಿಸ್ಟರ್ ಹಾಗೂ ಆಸರೆ ಫ್ರೆಂಡ್ಸ್ ಕದ್ರಿ ನೇತೃತ್ವದಲ್ಲಿ ನೆರವೇರಿತು.
ಆರ್ಥಿಕ ನೆರವನ್ನು ಅಪಘಾತದಿಂದಾಗಿ ಕಳೆದ ಆರು ತಿಂಗಳಿಂದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಮ ಚಂದ್ರ ಶೆಖರ್, ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಮಂಗಳೂರಿನ ಅನಿತಾ ಪ್ರಿಯಾ ರೊಡ್ರಿಗಸ್ ಅವರಿಗೆ ಹಸ್ತಾಂತರಿಸಲಾಯಿತು.
ಈ ವೇಳೆ ಮಾತನಾಡಿದ ಕದ್ರಿ ಕ್ರಿಕೆಟರ್ಸ್ ಕ್ಲಬ್ ರಿಜಿಸ್ಟರ್ ಅಧ್ಯಕ್ಷ ಗೌರವ್ ಜೆ ಕದ್ರಿ ಈ ಹಿಂದೆ ನಮ್ಮದೇ ಸಂಸ್ಥೆ ಆಸರೆ ಫ್ರೆಂಡ್ಸ್ ಕದ್ರಿ ಅಧ್ಯಕ್ಷ ದಿನೇಶ್ ಕದ್ರಿ ಹುಲಿ ವೇಷ ಧರಿಸಿ ಅದ್ರ ಹಣವನ್ನು ಆರ್ಥಿಕವಾಗಿ ಹಿಂದುಳಿದ ಅನಾರೋಗ್ಯ ಪೀಡಿತ ಕುಟುಂಬಗಳಿಗೆ ನೀಡಿದ್ದರು. ಈ ಬಾರಿ ವೈಯಕ್ತಿಕ ಕಾರಣದಿಂದ ಅವರಿಗೆ ವೇಷಧರಿಸಲು ಆಗಿಲ್ಲ ಹಾಗಾಗಿ ಈ ಕಾರ್ಯವನ್ನು ಆರವ್ ಜೆ ಕದ್ರಿ ಮುಂದುವರಿಸಿದ್ದಾರೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಕದ್ರಿ ಕ್ರಿಕೆಟರ್ಸ್ ಕ್ಲಬ್ ರಿಜಿಸ್ಟರ್ ಗೌರವ ಅಧ್ಯಕ್ಷ ದೀಪಕ್ ಸಾಲ್ಯಾನ್, ಕಾರ್ಯದರ್ಶಿ ಮೋಹನ್ ಕೊಪ್ಪಳ್ ಕದ್ರಿ, ಆಸರೆ ಫ್ರೆಂಡ್ಸ್ ಕೋಶಾಧಿಕಾರಿ ಮಂಜುನಾಥ್ ಕದ್ರಿ, ಉಪಾಧ್ಯಕ್ಷ ಧನರಾಜ್ ಎನ್.ಡಿ, ಆಸರೆ ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಕದ್ರಿ, ಕೋಶಾಧಿಕಾರಿ ದೀಪಕ್ ಶೆಟ್ಟಿ, ಯುವ ಸಂಗಮ್ ಕುದ್ರೋಳಿ ರಿ ಅಧ್ಯಕ್ಷ ಪ್ರಾಣೇಶ್ ಕದ್ರಿ ಕ್ರಿಕೆಟರ್ಸ್ ಕ್ಲಬ್ ನ ಸದಸ್ಯರು ಹಾಗು ಮತ್ತಿತರರು ಉಪಸ್ಥಿತರಿದ್ದರು.