ಮೂಡುಬಿದಿರೆ, ನ. 17 (DaijiworldNews/AA): ಅಕ್ರಮವಾಗಿ ಜಾನುವಾರ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧಿತರನ್ನು ಮನ್ಸೂರ್ ಅದ್ಯಪಾಡಿ ಅಲಿಯಾಸ್ ಮೊಹಮ್ಮದ್ ಮನ್ಸೂರ್, ಮೊಹಮ್ಮದ್ ಅಶ್ವದ್ ಮತ್ತು ಅಬ್ದುಲ್ ಮೊಹಮ್ಮದ್ ನಿಶಾಮ್ ಎಂದು ಗುರುತಿಸಲಾಗಿದೆ.
ಆರೋಪಿಗಳು ಕಾನೂನು ಉಲ್ಲಂಘಿಸಿ ಮೂರು ಜಾನುವಾರುಗಳನ್ನು ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 178/2025 ಕಲಂ 111 ಬಿ.ಎನ್.ಎಸ್, 11(1)(ಡಿ) ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ ಮತ್ತು ಕಲಂ: 4, 5, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧ್ಯಾದೇಶ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಪೊಲೀಸರ ಪ್ರಕಾರ, ಮೊದಲ ಆರೋಪಿ ಮನ್ಸೂರ್ ಅದ್ಯಪಾಡಿ ವಿರುದ್ಧ ಈ ಹಿಂದೆ ವಿವಿಧ ಪೊಲೀಸ್ ಠಾಣೆಗಳಲ್ಲಿ 29 ಪ್ರಕರಣಗಳು ದಾಖಲಾಗಿದ್ದು, ಇದು ಆತನ ಮೇಲಿನ ೩೦ನೇ ಪ್ರಕರಣವಾಗಿದೆ. ಎರಡನೇ ಆರೋಪಿ ಮೊಹಮ್ಮದ್ ಅಶ್ವದ್ ವಿರುದ್ಧ ಈ ಹಿಂದೆ ಉಳ್ಳಾಲದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯಡಿ ಒಂದು ಪ್ರಕರಣ ದಾಖಲಾಗಿತ್ತು, ಇದು ಆತನ ಮೇಲಿನ ಎರಡನೇ ಅಪರಾಧವಾಗಿದೆ. ಮೂರನೇ ಆರೋಪಿ ಅಬ್ದುಲ್ ಮೊಹಮ್ಮದ್ ನಿಶಾಮ್ ವಿರುದ್ಧ ದಾಖಲಾದ ಮೊದಲ ಪ್ರಕರಣ ಇದಾಗಿದೆ.
ಆರೋಪಿಗಳ ವಿರುದ್ಧ ಸಂಘಟಿತ ಅಪರಾಧ ಪ್ರಕರಣದಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ.