ಕಾಸರಗೋಡು, ನ. 17 (DaijiworldNews/AA): ಆಲ್ಟೋ ಕಾರು ಮತ್ತು ಥಾರ್ ಜೀಪಿನ ನಡುವೆ ಉಂಟಾದ ಅಪಘಾತದಲ್ಲಿ ಮಹಿಳೆಯೋರ್ವರು ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡು ಸಮೀಪದ ಮುಟ್ಟಂನಲ್ಲಿ ಭಾನುವಾರ ರಾತ್ರಿ 7.45 ರ ಸುಮಾರಿಗೆ ನಡೆದಿದೆ.




ಮಂಜೇಶ್ವರ ಮಚ್ಚಂಪಾಡಿ ಕೋಡಿಯ ಸಿ. ಪಿ ಫಾತಿಮ್ಮತ್ ಮಿರ್ಜನಾ (28) ಮೃತಪಟ್ಟ ಮಹಿಳೆ. ಕಾರಿನಲ್ಲಿದ್ದ ಮಚ್ಚಂಪಾಡಿಯ ಹುಸೈನ್ ಸಹದಿ (35), ಮರಿಯಮ್ಮತ್ ಝಕಿಯ್ಯಾ (15), ಜುಮಾನ (19) ಮತ್ತು ಅಬ್ದುಲ್ ಸಾಲಿಂ (3) ಗಾಯಗೊಂಡವರು. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಮುಂದಿನಿಂದ ಚಲಿಸುತ್ತಿದ್ದ ಕಾರು ಒಮ್ಮೆಲೇ ಬ್ರೇಕ್ ಹಾಕಿದ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತದ ತೀವ್ರತೆಗೆ ಕಾರು ನಜ್ಜು ಗುಜ್ಜಾಗಿದೆ. ಥಾರ್ ಜೀಪು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದಿದೆ. ಗಾಯಗೊಂಡವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ ಮಹಿಳೆ ಕಾರಿನಲ್ಲಿ ಪ್ರಯಾಣಿಕರಾಗಿದ್ದರು. ಜೀಪಿನಲ್ಲಿದ್ದವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಅಪಘಾತದ ಬಳಿಕ ರಾಷ್ಟೀಯ ಹೆದ್ದಾರಿಯಲ್ಲಿ ಕೆಲ ಸಮಯ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.