ಮಂಗಳೂರು, ನ. 16 (DaijiworldNews/AK):ವಿವಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣಗಳ ಸಮಗ್ರ ತನಿಖೆಗೆ ಸರಕಾರ ಕೂಡಲೇ ವಿಶೇಷ ಸಮಿತಿ, ನಿಯೋಗ ರಚಿಸಬೇಕು ಎಂದು ಎಬಿವಿಪಿ ಆಗ್ರಹಿಸಿದೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕ್ ಸುವಿತ್ ಶೆಟ್ಟಿ, ವಿ.ವಿ.ಯಲ್ಲಿ ನಡೆದಿರುವ ಭ್ರಷ್ಟಾಚಾರವೇ ವಿವಿಯ ವೈಫಲ್ಯಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಉಚ್ಚಕರ್ ಶಿಕ್ಷಾ ಅಭಿಯಾನ (ರೂಸಾ) ಯೋಜನೆಯಡಿಯಲ್ಲಿ 2013 ರಿಂದ 2017ರವರೆಗೆ ಮಂಗಳೂರು ವಿಶ್ವವಿದ್ಯಾಲಯವು 20 ಕೋ. ರೂ. ಅನುದಾನ ಪಡೆದಿತ್ತು. ಇದರಲ್ಲಿ 7 ಕೋ.ರೂ.ಗಳನ್ನು ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣಕ್ಕೆ ಮೀಸಲಿಟ್ಟಿದ್ದರೂ, ಅಲ್ಲಿ ಯಾವುದೇ ಹಾಸ್ಟೆಲ್ ನಿರ್ಮಾಣವಾಗಿಲ್ಲ. ಅದರ ಬಳಕೆಯ ಪ್ರಮಾಣ ಪತ್ರಕ್ಕಾಗಿ ಸುಳ್ಳು ದಾಖಲೆಗಳನ್ನು ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿರುವುದು ಈಗ ವಿಶ್ವವಿದ್ಯಾಲಯದ ಸ್ವಯಂ ಒಪ್ಪಿಗೆಯಿಂದಲೇ ಬೆಳಕಿಗೆ ಬಂದಿದೆ.
ಇದಕ್ಕೆ ಮುನ್ನ ಸೋಲಾರ್ ಹಗರಣ, ನಕಲಿ ಬಿಲ್ಲು ಹಗರಣ, ಸಿಸಿ ಕೆಮರಾ ಹಗರಣ, ಲೆಕ್ಚರ್ ಕಾಂಪ್ಲೆಕ್ಸ್ ಹಗರಣ, ಅಂತಾರಾಷ್ಟ್ರೀಯ ಹಾಸ್ಟೆಲ್ ಹಗರಣ, ಬೆಳಪು ಕ್ಯಾಂಪಸ್ ಹಗರಣ ನಡೆದಿದೆ. ಹತ್ತು ವರ್ಷಗಳ ಹಿಂದೆ 60 ಕೋ. ರೂ. ಮೊತ್ತದಲ್ಲಿ ಆರಂಭವಾದ ಅಂತಾರಾಷ್ಟ್ರೀಯ ಹಾಸ್ಟೆಲ್ ಕಟ್ಟಡ ನಿರ್ಮಾಣ ಕೇವಲ ಹಣ ಲೂಟಿ ಮಾಡಲು ಸೃಷ್ಟಿಸಿದ ಹುನ್ನಾರವಾಗಿ ಭೂತ ಬಂಗಲೆಯ ರೀತಿ ಸ್ಥಾಪಿತವಾಗಿದೆ ಎಂದು ಅವರು ಆರೋಪಿಸಿದರು.
ಈ ವೇಳೆ ರವಿಚಂದ್ರ, ಎಬಿವಿಪಿ ಜಿಲ್ಲಾ ಸಂಚಾಲಕ್ ಶ್ರೀಜಿತ್ ರೈ ಮಂಗಳೂರು ಮಂಗಳೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯರಾದ ರಮೇಶ್ ಕೆ. ಮಹಾನಗರ ಕಾರ್ಯದರ್ಶಿ ಶ್ರೀಲಕ್ಷ್ಮೀ ಉಪಸ್ಥಿತರಿದ್ದರು.