ಕಾಪು, ನ. 16 (DaijiworldNews/AA): ದಾಂಪತ್ಯ ಸಮಸ್ಯೆಗೆ ಪರಿಹಾರಕ್ಕಾಗಿ ಸಮಾಲೋಚನಾ ಕೇಂದ್ರದಲ್ಲಿ ಭೇಟಿ ನೀಡಿದ್ದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಾಪು ಪೊಲೀಸರು ನವೆಂಬರ್ 15ರ ಸಂಜೆ ಆಪ್ತ ಸಮಾಲೋಚಕನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೂಳೂರು ಗ್ರಾಮದ ನಿವಾಸಿ ನಿರಂಜನ್ ಶೇಖರ್ ಶೆಟ್ಟಿ (52) ಎಂದು ಗುರುತಿಸಲಾಗಿದೆ.
ಮಹಿಳೆಯು ತನ್ನ ದಾಪಂತ್ಯ ಸಮಸ್ಯೆಗಳಿಗೆ ಸಲಹೆ ಪಡೆಯಲು ಕಾಪು ತಾಲೂಕಿನ ಮೂಳೂರಿನ ವೆಲ್ನೆಸ್ ಸೆಂಟರ್ಗೆ ಭೇಟಿ ನೀಡಿದ್ದರು. ಸಮಾಲೋಚನೆ ನಡೆಯುತ್ತಿದ್ದಾಗ, ಆರೋಪಿಯು ಆಕೆಯನ್ನು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಘಟನೆಯ ನಂತರ, ಸಂತ್ರಸ್ತೆ ಕಾಪು ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಯಿತು. ಕಾರ್ಕಳ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಡಾ. ಹರ್ಷ ಪ್ರಿಯಂವದಾ ಮತ್ತು ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರ ಮಾರ್ಗದರ್ಶನದಲ್ಲಿ, ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕ ಶುಭಕರ ಮತ್ತು ಅವರ ತಂಡವು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.