ಬಂಟ್ವಾಳ, ನ. 15 (DaijiworldNews/AA): ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರು ನಿವಾಸಿಗಳಾದ ರವಿ (64), ನಂಜಮ್ಮ (75) ಹಾಗೂ ರಮ್ಯಾ (23) ದಾರುಣವಾಗಿ ಮೃತಪಟ್ಟವರು.
ಗಾಯಾಳುಗಳನ್ನು ಸುಶೀಲ, ಕೀರ್ತಿ ಕುಮಾರ್, ಕಿರಣ್, ಬಿಂದು, ಪ್ರಶಾಂತ್ ಹಾಗೂ ಚಾಲಕ ಸುಬ್ರಹ್ಮಣ್ಯ ಎಂದು ಗುರುತಿಸಲಾಗಿದ್ದು, ಚಿಂತಾಜಕನಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.
ಶನಿವಾರ ಮುಂಜಾನೆ ಸುಮಾರು 5 ಗಂಟೆ ವೇಳೆಗೆ, ಬೆಂಗಳೂರು ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಇನೋವಾ ಕಾರು ಚಾಲಕರ ನಿಯಂತ್ರಣ ತಪ್ಪಿ ನಾರಾಯಣ ಗುರು ವೃತ್ತಕ್ಕೆ ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಅಪಘಾತದ ಹೊಡೆತಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ.
ಕಾರಿನಲ್ಲಿ ಒಟ್ಟು 9 ಮಂದಿ ಸಂಬಂಧಿಕರು ಪ್ರಯಾಣಿಸುತ್ತಿದ್ದರು. ಘಟನೆಯ ಕುರಿತು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಪ್ರಾರಂಭವಾಗಿದೆ.