ಮಂಗಳೂರು, ನ. 14 (DaijiworldNews/AA): ಈ ಹಿಂದೆ ನವಮಂಗಳೂರು ಬಂದರು 90,000 ಟನ್ ಕಾರ್ಗೊ ನಿರ್ವಹಣೆ ಸಾಮರ್ಥ್ಯವನ್ನು ಹೊಂದಿತ್ತು. ಪ್ರಸ್ತುತ 46 ಮಿಲಿಯನ್ ಟನ್ ಕಾರ್ಗೊ ನಿರ್ವಹಣೆ ಮಾಡುತ್ತಿರುವ ನವ ಮಂಗಳೂರು ಬಂದರು ಪ್ರಾಧಿಕಾರ (ಎನ್ಎಂಪಿಎ)ದ ಸರಕು ನಿರ್ವಹಣಾ ಸಾಮರ್ಥ್ಯವನ್ನು ಕೇಂದ್ರ ಸರ್ಕಾರದ 'ಅಮೃತ್ ಕಾಲ್ ಮೆರಿಟೈಮ್ ಯೋಜನೆ' ಅಡಿಯಲ್ಲಿ, 2047 ರ ವೇಳೆಗೆ 100 ಮಿಲಿಯನ್ ಟನ್ಗೆ ಹೆಚ್ಚಿಸಲಾಗುವುದು ಎಂದು ಕೇಂದ್ರ ಸರ್ಕಾರದ ಬಂದರು ನೌಕಾಯಾನ ಹಾಗೂ ಜಲಸಾರಿಗೆ ಸಚಿವರಾದ ಸರ್ಬಾನಂದ ಸೋನಾವಾಲ್ ಘೋಷಿಸಿದರು.











ಪಣಂಬೂರಿನ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಎನ್ಎಂಪಿಎಯ ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ನವ ಮಂಗಳೂರು ಬಂದರು ಪರಿಸರ ಸ್ನೇಹಿ, ಹಸಿರು ಬಂದರಾಗಿ ಆಧುನಿಕ ಸೌಲಭ್ಯಗಳೊಂದಿಗೆ ದೇಶದ ಆರ್ಥಿಕ ಕ್ಷೇತ್ರಕ್ಕೆ, ಕರಾವಳಿಯಲ್ಲಿ ವಾಸಿಸುತ್ತಿರುವ ನಿವಾಸಿಗಳ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ. ಇದೀಗ ಬಂದರಿನ ಆರ್ಥಿಕ ಪ್ರಗತಿ ಹತ್ತು ಪಟ್ಟು ಹೆಚ್ಚಾಗಿದೆ. ಇದರಿಂದ ಫಲಾನು ಭವಿಗಳಿಗೆ ಹೆಚ್ಚು ಸಹಾಯವಾಗಲಿದೆ" ಎಂದು ಹೇಳಿದರು.
"ಭಾರತ ಪ್ರಪಂಚದ ಶಕ್ತಿಶಾಲಿ ಆಗಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಪ್ರಕಾರ ದೇಶದ ಆರ್ಥಿಕ ಪ್ರಗತಿ ವೇಗವಾಗಿ ಸಾಗುತ್ತಿದೆ. ಭಾರತದ ಆರ್ಥಿಕ ಬೆಳವಣಿಗೆ ಪ್ರಪಂಚದ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಕರ್ನಾಟಕ ಸ್ವಾವಲಂಬಿ, ಶಕ್ತಿಶಾಲಿ ರಾಜ್ಯವಾಗಿದೆ. ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಆತ್ಮ ನಿರ್ಭರ ಭಾರತದ ಹಾದಿಯಲ್ಲಿ ಮಂಗಳೂರಿನ ಕೊಡುಗೆ ಮಹತ್ವದ್ದಾಗಿದೆ" ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, "೫೦ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಎನ್ಎಂಪಿಎ ಬೆಳವಣಿಗೆಯ ಹಿಂದೆ ಸಾಕಷ್ಟು ಜನರ ಕೊಡುಗೆ ಇದೆ. ಎನ್ಎಂಪಿಎ ನೇರ ಹಾಗೂ ಪರೋಕ್ಷವಾಗಿ 30,000 ಜನರಿಗೆ ಉದ್ಯೋಗ ನೀಡಿದೆ" ಎಂದು ಶ್ಲಾಘಿಸಿದರು.
ಈ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ನೌಕಾ ಸಚಿವಾಲಾಯದ ಮಹಾಪ್ರಬಂಧಕ ಶ್ಯಾಮ್ ಜಗನ್ನಾಥ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಂಸದ ನಳಿನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಎನ್ಎಂಪಿಎ ಅಧ್ಯಕ್ಷ ಡಾ.ಅಕ್ಕರಾಜು ವೆಂಕಟರಮಣ ಸ್ವಾಗತಿಸಿದರು.
ಇದಕ್ಕೂ ಮುನ್ನ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಸರ್ಬಾನಂದ ಸೋನಾವಾಲ್ ಅವರು, "ಭಾರತದಲ್ಲಿ ಹಡಗು ನಿರ್ಮಾಣಗಳ ಕ್ಲಸ್ಟರ್ ಗಳನ್ನು ನಿರ್ಮಿಸುವ ಮೂಲಕ ಹಡಗು ನಿರ್ಮಾಣದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಲಾಗಿದೆ" ಎಂದು ತಿಳಿಸಿದರು.
"ಚೀನಾ, ಕೊರಿಯಾ, ಜಪಾನ್ನಂತಹ ದೇಶಗಳು ಹಡಗು ತಯಾರಿಕೆಯಲ್ಲಿ ವಿಶ್ವದ ಅಗ್ರ ರಾಷ್ಟ್ರಗಳಾಗಿವೆ. ಮುಂದಿನ ದಿನಗಳಲ್ಲಿ ಭಾರತದ ಒಡಿಶಾ, ಗುಜರಾತ್, ತಮಿಳುನಾಡು ಹಡಗು ನಿರ್ಮಾಣದಲ್ಲಿ ಸ್ವಾಯತ್ತತೆ ಸಾಧಿಸಲು ಕ್ಲಸ್ಟರ್ಗಳನ್ನು ಅಭಿವೃದ್ಧಿ ಪಡಿಸಲಾಗುವುದು" ಎಂದು ಮಾಹಿತಿ ನೀಡಿದರು.
"ನವಮಂಗಳೂರು ಬಂದರನ್ನಾಗಿ ಅಭಿವೃದ್ಧಿಪಡಿಸಿ, ನೌಕಾಯಾನದ ಪ್ರವಾಸೋದ್ಯಮ, ಕೈಗಾರಿಕಾ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಜೊತೆಗೆ ಆರ್ಥಿಕ ಸಂಪನ್ಮೂಲ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು" ಎಂದು ಹೇಳಿದರು.
"ಮಂಗಳೂರು ಬಂದರು ಸರಕು ನಿರ್ವಹಣೆಗೆ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಸೋಲಾರ್ ಶಕ್ತಿ, ಇಂಧನ ಕ್ಷಮತೆ ಸೇರಿದಂತೆ ಗ್ರೀನ್ ಪೋರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ 50 ವರ್ಷಗಳಲ್ಲಿ ನವಮಂಗಳೂರು ಬಂದರು ಕರ್ನಾಟಕ ಸರಕಾರ ಹಾಗೂ ಕೇಂದ್ರ ಸರ್ಕಾರ ಜಿಲ್ಲೆಯ ಜನತೆಯ ಸಹಕಾರದಿಂದ ಬೆಳೆದು ದೇಶಕ್ಕೆ ಕೊಡುಗೆ ನೀಡುತ್ತಿದೆ" ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಎನ್ಎಂಪಿಎ ಅಧ್ಯಕ್ಷ ಡಾ.ಅಕ್ಕರಾಜು ವೆಂಕಟರಮಣ ಮತ್ತಿತರರು ಉಪಸ್ಥಿತರಿದ್ದರು.