ಮಂಗಳೂರು, ನ. 13 (DaijiworldNews/AA): ಗೃಹಲಕ್ಷ್ಮೀ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ. ಲಿ. ಇದರ ನೂತನ ಸ್ವಂತ ಕಛೇರಿಯ ಉದ್ಘಾಟನಾ ಸಮಾರಂಭವು ನವೆಂಬರ್ 9 ರಂದು ಬೆಳಿಗ್ಗೆ 10.30ಕ್ಕೆ ಮಂಗಳೂರಿನ ಪಂಪ್ ವೆಲ್, ಕಪಿತಾನಿಯೋ ರಸ್ತೆ, ಲೋಟಸ್ ಗ್ಯಾಲಕ್ಸಿಯ 2ನೇ ಮಹಡಿಯಲ್ಲಿ ಜರುಗಿತು.



ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಶಿಲೆ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿಯವರು ಉದ್ಘಾಟಿಸಿ ಇಂದಿನ ದಿನಗಳಲ್ಲಿ ಭೂವ್ಯವಹಾರಕ್ಕೆ ಸಂಬಂಧಪಟ್ಟ ದಾಖಲಾತಿಗಳ ಒಟ್ಟುಗೂಡಿಸುವಿಕೆ ಹಾಗೂ ದಾಖಲಾತಿಗಳ ತಯಾರು ಮಾಡುವುದು ಅತ್ಯಂತ ಕ್ಲಿಷ್ಟಕರವಾಗಿದ್ದು ಕಛೇರಿ ಕಛೇರಿ ಅಲೆದಾಡುವಂತಹ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಗೃಹಲಕ್ಷ್ಮಿ ಹೌಸಿಂಗ್ ಸೊಲ್ಯೂಶನ್ಸ್ ಈ ಎಲ್ಲಾ ಕೆಲಸಗಳನ್ನು ಒಂದೇ ಕಡೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಶುಭ ಹಾರೈಸಿದರು.
ಗೃಹಲಕ್ಷ್ಮೀ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ.ಲಿ.ನ ಗೌರವ ಸಲಹೆಗಾರ ನೆರೋಳು ಈಶ್ವರ ಭಟ್, ದೀಪ ಪ್ರಜ್ವಲನೆಗೊಳಿಸಿದರು. ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಹೆಚ್. ವಿ. ರಾಘವೇಂದ್ರ ಅವರು ನ್ಯಾಯವಾದಿ ಬಾಲಕೃಷ್ಣ ಶರ್ಮ ಅವರ ಲಾ ಛೇಂಬರ್ನ ಉದ್ಘಾಟನೆಯನ್ನು ಮಾಡಿದರು.
ದಕ್ಷಿಣ ಕನ್ನಡದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ವೆಬ್ಸೈಟ್ನ ಅನಾವರಣಗೊಳಿಸಿ ಸಂಸ್ಥೆಗೆ ಶುಭಹಾರೈಸಿದರು. ಮಂಗಳೂರು ನಗರ ದಕ್ಷಿಣದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಮುಖ್ಯ ಅತಿಥಿಗಳಾಗಿ ಮಾತನಾಡಿ ಕ್ಲಿಷ್ಟಕರವಾದ ಭೂವ್ಯವಹಾರದ ದಾಖಲಾತಿಗಳನ್ನು ಸರಿಪಡಿಸುವಲ್ಲಿ ಬಾಲಕೃಷ್ಣ ಶರ್ಮರವರು ಪರಿಣಿತಿಯನ್ನು ಹೊಂದಿದ್ದು ಅವರು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಇತ್ತೀಚೆಗೆ ಶಾರದಾಂಬಾ ಟ್ರಸ್ಟಿಗೆ ಭೂದಾನ ಮಾಡಿರುವ ನ್ಯಾಯಾವಾದಿ ಬಾಲಕೃಷ್ಣ ಶರ್ಮ ಅವರನ್ನು ಶ್ಲಾಘಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ವಕೀಲರು ಹಾಗೂ ಮಾಜಿ ಎಂಎಲ್ಸಿ ಕೆ. ಮೋನಪ್ಪ ಭಂಡಾರಿ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಇವರು ಉಪಸ್ಥಿತರಿದ್ದರು. ಗೃಹಲಕ್ಷ್ಮಿ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ. ಲಿ. ಇದರ ಅಧ್ಯಕ್ಷರಾದ ನ್ಯಾಯವಾದಿ ಬಾಲಕೃಷ್ಣ ಶರ್ಮಾ ನೆರೋಳು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಕಂಪೆನಿಯ ಧೈಯೋದ್ದೇಶಗಳನ್ನು ವಿವರಿಸಿದರು.
ನಿರ್ದೇಶಕರಾದ ಡಾ. ಭಾಗ್ಯ ಬಿ. ಶರ್ಮಾ ಧನ್ಯವಾದ ಸಮರ್ಪಿಸಿದರು. ಆರ್.ಜಿ. ಅಭಿಷೇಕ್ ರವರು ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕಾರಿಗಳಾದ 10ಕ್ಕೂ ಹೆಚ್ಚು ಮಹನೀಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂಸ್ಥೆಯ ವತಿಯಿಂದ ಗೋಸಂರಕ್ಷಣೆಗಾಗಿ ಪಜೀರು ಗೋವನಿತಾಶ್ರಾಯ ಟ್ರಸ್ಟಿಗೆ ನಿಧಿಯನ್ನು ಈ ಸಂದರ್ಭದಲ್ಲಿ ನೆರೋಳು ಈಶ್ವರ ಭಟ್ ಸಮರ್ಪಿಸಿದರು.