ಬೆಳ್ತಂಗಡಿ, ನ. 13 (DaijiworldNews/AA): ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಮಂಜುಶ್ರೀ ನಗರದ ಮನೆಯೊಂದರಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಮುಂಬಾಗಿಲ ಬೀಗ ಮುರಿದು ಸುಮಾರು 9.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಅಂತಾರಾಜ್ಯ ಕಳ್ಳ ಇತ್ತೆ ಬರ್ಪೆ ಅಬೂಬಕ್ಕರ್ (71) ಎಂಬಾತನನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 11ರ ರಾತ್ರಿ ಪಿಎಸ್ಐ ಓಮನ ಮತ್ತು ಅವರ ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿದ್ದಾಗ, ಅನುಮಾನಾಸ್ಪದವಾಗಿ ಸ್ಕೂಟರ್ನಲ್ಲಿ ಬಂದ ವ್ಯಕ್ತಿಯನ್ನು ತಡೆದು ನಿಲ್ಲಿಸಿದ್ದರು. ಆತನ ದಾಖಲೆಗಳನ್ನು ಪರಿಶೀಲಿಸಿ ಪ್ರಶ್ನಿಸಿದಾಗ, ಆತನೇ ಕುಖ್ಯಾತ ಕಳ್ಳ ಇತ್ತೆ ಬರ್ಪೆ ಅಬೂಬಕ್ಕರ್ ಎಂದು ಪೊಲೀಸರು ಗುರುತಿಸಿದರು. ಪ್ರಾಥಮಿಕ ತನಿಖೆಯಲ್ಲಿ, ಮಂಗಳೂರಿನಲ್ಲಿ ನಡೆದ ಕಳ್ಳತನದಲ್ಲೂ ಆತನ ಪಾತ್ರವಿರುವ ಶಂಕೆ ವ್ಯಕ್ತವಾಗಿತ್ತು. ಕುತ್ಲೂರು ಗ್ರಾಮದ ಮನೆಯಲ್ಲಿ ಕಳ್ಳತನ ನಡೆಸಿರುವುದು ಪ್ರಾಥಮಿಕ ತನಿಖೆ ದೃಢಪಟ್ಟಿದೆ.
ಮಂಜುಶ್ರೀ ನಗರ ನಿವಾಸಿ ಅವಿನಾಶ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಅಕ್ಟೋಬರ್ 2ರಂದು ಅವರು ಮನೆಗೆ ಬೀಗ ಹಾಕಿ ಹೋಗಿದ್ದರು. ಅಕ್ಟೋಬರ್ 6ರಂದು ಸಂಜೆ 5 ಗಂಟೆಗೆ ಅವರು ಹಿಂದಿರುಗಿದಾಗ ಕಳ್ಳತನ ನಡೆದಿರುವುದು ತಿಳಿದುಬಂದಿತ್ತು. ಕಳುವಾದ ವಸ್ತುಗಳಲ್ಲಿ ಕರಿಮಣಿ ಸರ, ಮುತ್ತಿನ ಸರ ಮತ್ತು ಚಿನ್ನದ ಸರಗಳು ಸೇರಿದ್ದು, ಒಟ್ಟು 149 ಗ್ರಾಂ ತೂಕವಿದ್ದು, ಅದರ ಮೌಲ್ಯ ಸುಮಾರು 9.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯನ್ನು ಪೊಲೀಸರು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಪೊಲೀಸರ ಮನವಿ ಮೇರೆಗೆ ನ್ಯಾಯಾಲಯವು ನವೆಂಬರ್ 15ರವರೆಗೆ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಕಳವು ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಪುರ್ಮಠ ಮತ್ತು ವೇಣೂರು ಪೊಲೀಸ್ ತಂಡದ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.
'ಇತ್ತೆ ಬರ್ಪೆ' ಎಂದೇ ಅಬೂಬಕ್ಕರ್ ಪರಿಚಿತ:
ಚಿಕ್ಕಮಗಳೂರು ಮೂಲದ ಅಬೂಬಕ್ಕರ್ ಸದ್ಯ ಸುರತ್ಕಲ್ ಸಮೀಪದ ಕಾನ ಬಳಿ ವಾಸಿಸುತ್ತಿದ್ದ. ಕಳೆದ ನಾಲ್ಕು ದಶಕಗಳಲ್ಲಿ, ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಹಾಗೂ ಕೇರಳದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ದಾಖಲಾದ ೫೦ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಪದೇ ಪದೇ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದಾನೆ.
71 ವರ್ಷದ ಅಬೂಬಕ್ಕರ್ಗೆ ಕಳ್ಳತನವೇ ವೃತ್ತಿಯಾಗಿದೆ. ಈ ವರ್ಷ ಜೂನ್ 27ರಂದು, ಆತ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮಟ್ಟಾರು ದೇವಸ್ಥಾನದ ಬಳಿಯ ಮನೆಯೊಂದಕ್ಕೆ ಕನ್ನ ಹಾಕಿ 7.50 ಲಕ್ಷ ರೂ. ಮೌಲ್ಯದ 66.76 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿದ್ದ. ಆಗ ಬಂಧನಕ್ಕೊಳಗಾಗಿದ್ದ ಆತ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ.
1980ರ ದಶಕದಲ್ಲಿ ಚಿಕ್ಕಮಗಳೂರಿನಲ್ಲಿ ಆಟೋ-ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ, ಆತ ತನ್ನ ಆಟೋ-ರಿಕ್ಷಾದ ಹಿಂಭಾಗದಲ್ಲಿ ಜನಪ್ರಿಯ ಯಕ್ಷಗಾನ ಪ್ರಸಂಗದ ಶೀರ್ಷಿಕೆಯಾದ 'ಇತ್ತೆ ಬರ್ಪೆ' ಎಂದು ಬರೆದುಕೊಂಡಿದ್ದ. ಅಂದಿನಿಂದ ಆತ ಅದೇ ಹೆಸರಿನಿಂದ ಗುರುತಿಸಲ್ಪಟ್ಟಿದ್ದಲ್ಲದೆ, ಕುಖ್ಯಾತ ರಿಪ್ಪರ್ ಚಂದ್ರನ್ ಗ್ಯಾಂಗ್ನ ಸದಸ್ಯ ಎಂದೂ ಪರಿಗಣಿಸಲ್ಪಟ್ಟಿದ್ದ.