ಮಂಗಳೂರು, ನ. 11 (DaijiworldNews/AA): ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬಸ್ಗಳ ಬಾಗಿಲುಗಳನ್ನು ಮುಚ್ಚುವುದನ್ನು ಕಡ್ಡಾಯಗೊಳಿಸುವಂತೆ ಜಿಲ್ಲಾಡಳಿತವು ಒಂದು ವರ್ಷದ ಹಿಂದೆಯೇ ನಿರ್ದೇಶನ ಹೊರಡಿಸಿದ್ದರೂ, ಆದೇಶ ಮಾಡಿ ವರ್ಷ ಕಳೆದರು ಸುಮಾರು ಶೇ. 90 ಬಸ್ಗಳು ಇನ್ನೂ ಆದೇಶವನ್ನು ಪಾಲನೆ ಮಾಡಿಲ್ಲ.
https://daijiworld.ap-south-1.linodeobjects.com/Linode/images3/bsdrntpt_111125_1.jpg
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಲಿಸುವ ಬಸ್ಗಳ ಮೆಟ್ಟಿಲಿನಲ್ಲಿ ಪ್ರಯಾಣಿಕರು ನೇತಾಡುವುದರಿಂದ ಅಪಘಾತಗಳು ಸಂಭವಿಸಿದ್ದ ಹಿನ್ನಲೆ ಈ ನಿರ್ದೇಶನವನ್ನು ಜಿಲ್ಲಾಡಳಿತ ಹೊರಡಿಸಿತು. ಜಿಲ್ಲೆಯೊಳಗೆ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ನಡುವೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಎಕ್ಸ್ಪ್ರೆಸ್ ಮತ್ತು ಸರ್ವಿಸ್ ಬಸ್ಗಳಲ್ಲಿಯೂ ಸಹ, ಹೆಚ್ಚಿನವು ನಿಯಮವನ್ನು ಜಾರಿಗೆ ತಂದಿಲ್ಲ ಎಂದು ವರದಿಯಾಗಿದೆ. ಕೆಲವು ಕೆಎಸ್ಆರ್ಟಿಸಿ ಬಸ್ಗಳು ಸಹ ನಿರ್ದೇಶನವನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ.
ಸಂಚಾರ ನಿಯಮಗಳ ಪ್ರಕಾರ ಮತ್ತು ರಸ್ತೆ ಸುರಕ್ಷತೆಯನ್ನು ಉತ್ತೇಜಿಸಲು ಪೊಲೀಸರು ಜಾಗೃತಿ ಅಭಿಯಾನಗಳು ಮತ್ತು ಜಾರಿ ಅಭಿಯಾನಗಳನ್ನು ನಡೆಸುತ್ತಿದ್ದರೂ, ಫುಟ್ಬೋರ್ಡ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಮಸ್ಯೆ ನಿರಂತರವಾಗಿ ಮುಂದುವರೆದಿದೆ. ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಪೊಲೀಸರು ದಂಡ ಮತ್ತು ಪ್ರಕರಣಗಳನ್ನು ದಾಖಲಿಸಿದ ನಂತರವೂ, ಮರುದಿನವೇ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಎಂದು ಸಾರ್ವಜನಿಕರ ಆರೋಪವಾಗಿದೆ.
ಈ ನಿರ್ದೇಶನಕ್ಕೆ ಬಸ್ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹೆಚ್ಚಿನ ಖಾಸಗಿ ಬಸ್ಗಳು ಈಗಾಗಲೇ ಎರಡು ಬಾಗಿಲುಗಳನ್ನು ಹೊಂದಿವೆ, ಆದರೆ ಪ್ರತಿ ಟ್ರಿಪ್ನಲ್ಲೂ ಅವುಗಳನ್ನು ನಿರ್ವಹಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವುದು ಅಪ್ರಾಯೋಗಿಕವಾಗಿದೆ ಎಂದು ಹೇಳಿದ್ದಾರೆ. ನಿರ್ವಾಹಕರು ಈಗಾಗಲೇ ಆರ್ಥಿಕ ನಷ್ಟವನ್ನು ಎದುರಿಸುತ್ತಿರುವ ಸಮಯದಲ್ಲಿ ನ್ಯೂಮ್ಯಾಟಿಕ್ ಬಾಗಿಲುಗಳನ್ನು ಅಳವಡಿಸುವುದರಿಂದ ಹೆಚ್ಚುವರಿ ವೆಚ್ಚಗಳು ಉಂಟಾಗುತ್ತವೆ ಎಂದು ಅವರ ವಾದವಾಗಿದೆ.
ನಗರ ಪ್ರದೇಶಗಳಲ್ಲಿ, ಪ್ರತಿ ನೂರು ಮೀಟರ್ಗಳಿಗೊಮ್ಮೆ ಬಸ್ ನಿಲ್ದಾಣಗಳು ಇರುವಲ್ಲಿ, ಪದೇ ಪದೇ ಬಾಗಿಲು ತೆರೆಯುವುದು ಮತ್ತು ಮುಚ್ಚುವುದು ಸರಿಯಲ್ಲ ಎಂದು ಜನರ ಅಭಿಪ್ರಾಯ.