ಮಂಗಳೂರು, ನ. 09 (DaijiworldNews/TA): ನಗರದಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ತೀವ್ರಗೊಳ್ಳುತ್ತಿದ್ದು, ಕಳೆದ ಕೆಲವು ವಾರಗಳಲ್ಲಿ ಕಮಿಷನರೇಟ್ ವ್ಯಾಪ್ತಿಯ ಹಲವು ಠಾಣೆಗಳಲ್ಲಿ ಸರಣಿ ಕಳ್ಳತನಗಳು ವರದಿಯಾಗಿವೆ. ವಿಶೇಷವಾಗಿ ಮಂಗಳೂರು ನಗರ ಮತ್ತು ಉಳ್ಳಾಲ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿನಿಂದ ಅನೇಕ ಪ್ರಯಾಣಿಕರು ತಮ್ಮ ವಾಹನ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ತಿಂಗಳಲ್ಲಿ 11 ಕಳ್ಳತನ ಪ್ರಕರಣಗಳು:
ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 30ರವರೆಗೆ ಪಾಂಡೇಶ್ವರ, ಬಂದರ್, ಉರ್ವಾ, ಕದ್ರಿ, ಉಳ್ಳಾಲ, ಕೊಣಾಜೆ ಮತ್ತು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 11 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಹೆಚ್ಚಿನ ಕಳ್ಳತನಗಳು ರಾತ್ರಿ ವೇಳೆಯಲ್ಲಿಯೇ ನಡೆದಿದ್ದು, ವಾಹನ ಮಾಲೀಕರು ಬೆಳಿಗ್ಗೆ ಪಾರ್ಕಿಂಗ್ ಸ್ಥಳಕ್ಕೆ ಬಂದಾಗ ತಮ್ಮ ಬೈಕ್ ಕಾಣೆಯಾಗಿದ್ದು ಕಂಡು ಬಂದಿದೆ.
ಕೆಲವು ಪ್ರಕರಣಗಳಲ್ಲಿ ಕಳ್ಳತನ ಕೇವಲ 15 ನಿಮಿಷಗಳಲ್ಲಿ!:
ತೊಕ್ಕೊಟ್ಟು ಮತ್ತು ಪಂಪ್ವೆಲ್ ಪ್ರದೇಶಗಳಲ್ಲಿ ಕಳ್ಳರು ಕೇವಲ 15-16 ನಿಮಿಷಗಳಲ್ಲೇ ಸ್ಕೂಟರ್ ಕಳ್ಳತನ ಮಾಡಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸ್ಪಷ್ಟವಾಗಿದೆ. ರಾಯಲ್ ಎನ್ಫೀಲ್ಡ್ ಬುಲೆಟ್, ದುಬಾರಿ ಸ್ಕೂಟರ್ ಹಾಗೂ ಮೋಟಾರ್ಸೈಕಲ್ಗಳನ್ನೇ ಗುರಿಯಾಗಿಸುತ್ತಿರುವುದು ಪೊಲೀಸರ ಗಮನ ಸೆಳೆದಿದೆ.
ಆಸ್ಪತ್ರೆ, ಮಾಲ್ ಮತ್ತು ಚಿತ್ರಮಂದಿರ ಪಾರ್ಕಿಂಗ್ ಪ್ರದೇಶಗಳೇ ಟಾರ್ಗೆಟ್!:
ಕಳ್ಳರು ಜನನಿಬಿಡ ಸ್ಥಳಗಳಲ್ಲಿ ಪಾರ್ಕ್ ಮಾಡಿರುವ ವಾಹನಗಳನ್ನೇ ಕದ್ದೊಯ್ಯುತ್ತಿದ್ದಾರೆ. ಆಸ್ಪತ್ರೆ, ಮಾಲ್ ಹಾಗೂ ಸಿನಿಮಾ ಮಂದಿರಗಳ ಬಳಿಯ ಪಾರ್ಕಿಂಗ್ ಪ್ರದೇಶಗಳಿಂದ ಹಲವು ಕಳ್ಳತನಗಳು ವರದಿಯಾಗಿವೆ.
ಪೊಲೀಸರು ಕಳ್ಳತನಗಳು ಸ್ಥಳೀಯ ದುಷ್ಕರ್ಮಿಗಳಿಂದ ನಡೆಯುತ್ತಿವೆಯೇ ಅಥವಾ ಹೊರ ಜಿಲ್ಲೆ/ರಾಜ್ಯದಿಂದ ಬಂದ ಸಂಘಟಿತ ಗ್ಯಾಂಗ್ನ ಕೃತ್ಯವೇ ಎಂದು ಪರಿಶೀಲಿಸುತ್ತಿದ್ದಾರೆ. ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಮುಖ ಕಳ್ಳತನಗಳ ವಿವರ:
ಪಾಂಡೇಶ್ವರ: ಸೆ.30 – ಆಸ್ಪತ್ರೆ ಮತ್ತು ಮಾಲ್ ಪಾರ್ಕಿಂಗ್ನಿಂದ 2 ಬೈಕ್ಗಳು ಕಳವು.
ಬಂದರ್: ಅ.13 ಮತ್ತು ಅ.25 – ಕೆಎಸ್ ರಾವ್ ರಸ್ತೆಯ ಸಿನಿಮಾ ಪಾರ್ಕಿಂಗ್ ಹಾಗೂ ಅಂಗಡಿ ಹೊರಗಿನಿಂದ ಕಳ್ಳತನ.
ಉರ್ವಾ: ಅ.28 – ಬಿಜೈ ಕಾಪಿಕಾಡ್ ಬಳಿಯ ಅಂಗಡಿಯ ಮುಂದೆ ಬೈಕ್ ಕಳವು.
ಕದ್ರಿ: ಅ.17 – ಫಲ್ನೀರ್ ಆಸ್ಪತ್ರೆಯ ಹೊರಗೆ ನಿಲ್ಲಿಸಿದ್ದ ಬೈಕ್ ನಾಪತ್ತೆ.
ಉಳ್ಳಾಲ: ಅ.4 ಮತ್ತು ಅ.17 – ದೇರಳಕಟ್ಟೆ ಮತ್ತು ತೊಕ್ಕೊಟ್ಟುವಿನಿಂದ ಎರಡು ಬೈಕ್ಗಳು ಕಳವು.
ಕೊಣಾಜೆ: ಅ.1 ಮತ್ತು ಅ.15 – ಪಾವೂರು ಹಾಗೂ ನಾಟೆಕಲ್ ಪ್ರದೇಶಗಳಲ್ಲಿ ಸ್ಕೂಟರ್ ಕಳ್ಳತನ.
ಕಂಕನಾಡಿ ನಗರ: ಅ.10 – ಉಜ್ಜೋಡಿ ಕಾರು ಶೋರೂಂ ಎದುರಿನಿಂದ ಸ್ಕೂಟರ್ ನಾಪತ್ತೆ.
ವಾಹನ ಮಾಲೀಕರು ತಮ್ಮ ಬೈಕ್ಗಳನ್ನು ಸುರಕ್ಷಿತವಾಗಿ ಲಾಕ್ ಮಾಡಿ, ಸಾಧ್ಯವಾದರೆ ಸಿಸಿಟಿವಿ ಮೇಲ್ವಿಚಾರಣೆಯುಳ್ಳ ಸ್ಥಳಗಳಲ್ಲಿ ಮಾತ್ರ ಪಾರ್ಕ್ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಸಾರ್ವಜನಿಕರಿಂದ ಯಾವುದೇ ಅನುಮಾನಾಸ್ಪದ ಚಟುವಟಿಕೆ ಗಮನಿಸಿದರೆ ತಕ್ಷಣ ಹತ್ತಿರದ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.