ಪುತ್ತೂರು, ನ. 08 (DaijiworldNews/AA): ಕಸಾಯಿಖಾನೆಗೆ ಸಾಗಾಟ ಮಾಡುವವರಿಗೆ ಜಾನುವಾರುಗಳನ್ನು ಮಾರಾಟ ಮಾಡಿದ ಆರೋಪದಲ್ಲಿ ಧರ್ಮಸ್ಥಳ ಪೊಲೀಸರು ಮುಟ್ಟುಗೋಲು ಹಾಕಿದ್ದ ಪಟ್ರಮೆ ಗ್ರಾಮದ ಪಟ್ಟೂರು ನಿವಾಸಿ ಝೊಹಾರ ಎಂಬುವವರ ಮನೆಯನ್ನು ಬಿಡುಗಡೆ ಮಾಡುವಂತೆ ಪುತ್ತೂರಿನ ಸಹಾಯಕ ಆಯುಕ್ತರು ಸ್ಟೆಲ್ಲಾ ವರ್ಗೀಸ್ ಅವರು ಆದೇಶಿಸಿದ್ದಾರೆ ಎಂದು ಬೆಳ್ತಂಗಡಿ ತಾಲೂಕು ಸಿಪಿಎಂ ಕಾರ್ಯದರ್ಶಿ ಮತ್ತು ನ್ಯಾಯವಾದಿ ಬಿ. ಎಂ. ಭಟ್ ತಿಳಿಸಿದ್ದಾರೆ.

ಝೊಹರಾ ಅವರು ಕೇವಲ ಜಾನುವಾರುಗಳನ್ನು ಮಾರಾಟ ಮಾಡಿದ್ದಾರೆ ಎಂಬ ಕಾರಣಕ್ಕೆ ಪೊಲೀಸರು ಮನೆ ಜಪ್ತಿ ಮಾಡಿರುವ ಕ್ರಮವನ್ನು ಪ್ರಶ್ನಿಸಿ ನ್ಯಾಯವಾದಿ ಬಿ. ಎಂ. ಭಟ್ ಅವರು ಪುತ್ತೂರು ಎಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣವನ್ನು ಪರಿಶೀಲಿಸಿದ ಎಸಿ ಸ್ಟೆಲ್ಲಾ ವರ್ಗೀಸ್ ಅವರು ಜಪ್ತಿ ಮಾಡಲಾಗಿದ್ದ ಮನೆಯನ್ನು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದ್ದಾರೆ.
ನವೆಂಬರ್ 4 ರಂದು, ಧರ್ಮಸ್ಥಳ ಪೊಲೀಸರು ಅಕ್ರಮ ಜಾನುವಾರು ಸಾಗಾಟ ಪ್ರಕರಣವನ್ನು ಪತ್ತೆಹಚ್ಚಿ, ಸಾಗಾಟದಲ್ಲಿ ಭಾಗಿಯಾದವರ ವಿರುದ್ಧ ದೂರು ದಾಖಲಿಸಿದ್ದರು. ಬಳಿಕ, ಈ ಜಾನುವಾರುಗಳನ್ನು ಅವರಿಗೆ ಮಾರಾಟ ಮಾಡಿದ ಆರೋಪದ ಮೇಲೆ ಪಟ್ಟೂರಿನ ಝೊಹರಾ ಅವರ ವಿರುದ್ಧವೂ ಪ್ರಕರಣ ದಾಖಲಿಸಿದ್ದರು. ತನಿಖೆ ಮುಂದುವರಿಸಿದ ಪೊಲೀಸರು, ಜಾನುವಾರು ಮಾರಾಟ ಮಾಡಿದವರ ನಿವಾಸದಲ್ಲಿ ಕಸಾಯಿಖಾನೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಝೊಹರಾ ಅವರ ಮನೆಯನ್ನು ಜಪ್ತಿ ಮಾಡಿದ್ದರು.
ನವೆಂಬರ್ 6 ರಂದು, ಪೊಲೀಸರು ಝೊಹರಾ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ತಾಯಿ ಸಾರಮ್ಮ ಅವರಿಗೆ ನೋಟಿಸ್ ನೀಡಿ, ಯಾವುದೇ ಸ್ಪಷ್ಟೀಕರಣಕ್ಕೆ ಅವಕಾಶ ನೀಡದೆ ಅದೇ ದಿನ ಮನೆಯನ್ನು ಸೀಲ್ ಮಾಡಿದ್ದರು. ಪರಿಣಾಮವಾಗಿ, ಇಬ್ಬರು ಶಾಲಾ ಮಕ್ಕಳು ಮತ್ತು ಮತ್ತೊಬ್ಬ ಮಗುವನ್ನು ಒಳಗೊಂಡಂತೆ ಕುಟುಂಬವು ಆಶ್ರಯವಿಲ್ಲದೆ ಬೀದಿಗೆ ಬಂದಿತ್ತು.
ನಂತರ, ವಕೀಲ ಬಿ. ಎಂ. ಭಟ್ ಅವರು ಮನೆ ಜಪ್ತಿ ಮಾಡಿರುವ ಕ್ರಮ ಕಾನೂನುಬಾಹಿರ ಎಂದು ಆರೋಪಿಸಿ ಬೆಳ್ತಂಗಡಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಅಲ್ಲದೆ, ಪುತ್ತೂರು ಸಹಾಯಕ ಆಯುಕ್ತರಿಗೆ ಅರ್ಜಿ ಸಲ್ಲಿಸಿದ ನಂತರ, ಎಸಿ ಸ್ಟೆಲ್ಲಾ ವರ್ಗೀಸ್ ಅವರು ಪೊಲೀಸರು ಜಪ್ತಿ ಮಾಡಿದ್ದ ಮನೆಯನ್ನು ಬಿಡುಗಡೆ ಮಾಡಲು ಆದೇಶ ನೀಡಿದರು.
ಝೊಹರಾ ಅವರ ಕುಟುಂಬವು ಡೈರಿ ಫಾರ್ಮಿಂಗ್ನಲ್ಲಿ ತೊಡಗಿದ್ದು, ಒಂದು ಹಸು ಮತ್ತು ಎರಡು ಕರುಗಳನ್ನು ಮಾರಾಟ ಮಾಡಿದ್ದರು ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. ಹಾಲು ಉತ್ಪಾದಕರು ಮತ್ತು ರೈತರಲ್ಲಿ ಜಾನುವಾರುಗಳ ಖರೀದಿ ಮತ್ತು ಮಾರಾಟ ಸಾಮಾನ್ಯವಾಗಿದೆ. ಕೊಳ್ಳುವವರು ಆ ಪ್ರಾಣಿಗಳನ್ನು ಹೇಗೆ ಬಳಸುತ್ತಾರೆ ಎಂಬುದಕ್ಕೆ ಮಾರಾಟಗಾರರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪೂರ್ವ ಸೂಚನೆ ಅಥವಾ ವಿವರಣೆಗೆ ಅವಕಾಶ ನೀಡದೆ ಮನೆ ಜಪ್ತಿ ಮಾಡಿರುವ, ಅದರಲ್ಲೂ ಮಹಿಳೆ ಮತ್ತು ಮಕ್ಕಳು ವಾಸಿಸುತ್ತಿದ್ದ ಮನೆಯನ್ನು ಸೀಜ್ ಮಾಡಿರುವ ಪೊಲೀಸ್ ಕ್ರಮ ಕಾನೂನುಬಾಹಿರ. ಝೊಹರಾ ಅವರ ಆಸ್ತಿಯಲ್ಲಿ ಕಸಾಯಿಖಾನೆಯ ಯಾವುದೇ ಪುರಾವೆಯನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಿಲ್ಲ. ಹಸುವನ್ನು ಮಾರಾಟ ಮಾಡುವುದು ಆಸ್ತಿಯನ್ನು ಜಪ್ತಿ ಮಾಡುವಂತಹ ಅಪರಾಧವಲ್ಲ ಎಂದು ಬಿ. ಎಂ. ಭಟ್ ತಿಳಿಸಿದ್ದಾರೆ.
ಜಾನುವಾರು ಮಾರಾಟವನ್ನು ಅಂತಹ ಅಪರಾಧವೆಂದು ಪರಿಗಣಿಸಿದರೆ, ಎಲ್ಲ ರೈತರ ಜಮೀನುಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ. ಸ್ಪಷ್ಟನೆ ನೀಡಲು ಸಮಯಾವಕಾಶ ನೀಡದೆ ಒಂದೇ ದಿನ ನೋಟಿಸ್ ನೀಡಿ ಮನೆಯನ್ನು ಜಪ್ತಿ ಮಾಡಿದ ಪೊಲೀಸರ ಕ್ರಮ ಸರಿಯಾದುದಲ್ಲ. ಪುತ್ತೂರು ಸಹಾಯಕ ಆಯುಕ್ತರ ಆದೇಶದ ಮೂಲಕ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರೆತಿದೆ ಎಂದು ಅವರು ಹೇಳಿದ್ದಾರೆ.