ಉಡುಪಿ, ನ. 08 (DaijiworldNews/TA): ದಂಡನಾಯಕನು ದೇವರ ಕೀರ್ತನೆಯ ದಾಸನಾಗಿ ಮೆರೆದ ಆ 15-16ನೇ ಶತಮಾನದಲ್ಲಿ ಕುರುಬ ಜನಾಂಗದ ವ್ಯಕ್ತಿಯ ಭಕ್ತಿಗೆ ಸಾಕ್ಷಾತ್ ಪರಮಾತ್ಮನೇ ಪರವಶವಾದ ಕಥನ ಪ್ರತಿ ವರ್ಷ ನವೆಂಬರ್ 8ರಂದು ಮರುಕಳಿಸುತ್ತದೆ. ಕಾರಣ ಕನಕದಾಸ ಜಯಂತಿ ಕರ್ನಾಟಕದ ಸಾಂಸ್ಕೃತಿಕ ಮತ್ತು ಭಕ್ತಿಪರ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನ. ಈ ದಿನವನ್ನು ಕೇವಲ ಒಂದು ಹಬ್ಬವಾಗಿ ಅಲ್ಲ, ಸಮಾನತೆ, ಭಕ್ತಿ ಮತ್ತು ಜ್ಞಾನಕ್ಕೆ ನಿದರ್ಶನವಾಗಿ ಆಚರಿಸಲಾಗುತ್ತದೆ. ಇದು ಮಹಾನ್ ಕವಿ, ಸಂಗೀತಜ್ಞ ಹಾಗೂ ಭಕ್ತನಾದ ಕನಕದಾಸರ ಜನ್ಮದಿನವನ್ನು ಸ್ಮರಿಸಲು, ಅವರ ನೀತಿ ಬೋಧನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಇರುವ ಪ್ರಮುಖ ದಿನವಾಗಿದೆ.

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ
ನೀ ದೇಹದೊಳಗೋ ನಿನ್ನೊಳು ದೇಹವೋ
ಕಾಗಿನೆಲೆಯಾದಿಕೇಶವ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ
15-16ನೇ ಶತಮಾನದಲ್ಲಿ ಜನಿಸಿದ ಸಂತ ಕವಿ ಕನಕದಾಸರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದವರು. ಕೆಳವರ್ಗದ ಕುಟುಂಬದಲ್ಲಿ ಹುಟ್ಟಿದರೂ, ತಮ್ಮ ಭಕ್ತಿ, ಜ್ಞಾನ ಮತ್ತು ಕೀರ್ತನೆಗಳ ಮೂಲಕ ಜಾತಿ ವ್ಯವಸ್ಥೆಗೆ ವಿರುದ್ಧ ಧ್ವನಿಯನ್ನು ಎತ್ತಿ, ಸಾಮಾಜಿಕ ಮೌಲ್ಯಗಳನ್ನು ಸಾರಿದ ದಾಸಶ್ರೇಷ್ಠರಾದವರು. ಕನಕದಾಸರು ಮೂಲತಃ ತುಗಲೂರು (ಇಂದಿನ ಹಾವೇರಿ ಜಿಲ್ಲೆ) ಎಂಬ ಊರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ತಿಮ್ಮಪ್ಪ ನಾಯ್ಕ ಅವರು ವೀರಶೈವ ಕುಟುಂಬದಲ್ಲಿ ಹುಟ್ಟಿ ನಂತರ ಭಕ್ತಿ ಮಾರ್ಗವನ್ನು ಆಯ್ಕೆಮಾಡಿದರು. ಶ್ರೀ ವ್ಯಾಸರಾಜರು ಅವರ ಗುರುಗಳಾಗಿದ್ದು, ಅವರಿಂದ “ಕನಕದಾಸ” ಎಂಬ ಹೆಸರನ್ನು ಪಡೆದರು. ಅವರು ಭಗವಂತನ ಭಕ್ತಿಯಿಂದ ತುಂಬಿದ ಕೃತಿಗಳನ್ನು ರಚಿಸಿ ಜನರ ನಡುವೆ ಸಮಾನತೆ, ವಿನಯ, ಸತ್ಯ, ಅಹಿಂಸೆ ಎಂಬ ಮೌಲ್ಯಗಳನ್ನು ಸಾರಿದರು.
ದಂಡನಾಯಕರಾಗಿದ್ದ ಕನಕದಾಸರು ಯುದ್ಧದಲ್ಲಿ ಸೋತ ಬಳಿಕ ವೈರಾಗ್ಯ ಉಂಟಾಗಿ, ಬಳಿಕ ಅವರು ಭಗವಂತನ ಭಕ್ತನಾಗಿ ತಮ್ಮ ಬದುಕನ್ನು ಸಂಪೂರ್ಣವಾಗಿ ಹರಿದಾಸ ಪರಂಪರೆಯ ಸೇವೆಗೆ ಅರ್ಪಿಸಿದರು. ಶ್ರೀಕೃಷ್ಣನ ಪರಮ ಭಕ್ತರಾಗಿದ್ದು, ತಮ್ಮ ಕೀರ್ತನೆಗಳ ಮೂಲಕ ದೇವರ ಭಕ್ತಿ ಮತ್ತು ಸಮಾಜದ ನೈತಿಕ ಮೌಲ್ಯಗಳನ್ನು ಸಾರಿದವರು.
ಉಡುಪಿ ಶ್ರೀ ಕೃಷ್ಣ ದೇವಸ್ಥಾನಕ್ಕೂ ಕನಕದಾಸರಿಗೂ ಇದೆ ಮರೆಯದ ನಂಟು! :
ಕರ್ನಾಟಕದ ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಉಡುಪಿ ಶ್ರೀ ಕೃಷ್ಣ ದೇವಸ್ಥಾನವು ಒಂದಾಗಿದೆ. ಈ ದೇವಾಲಯದಲ್ಲಿ "ಕನಕನ ಕಿಂಡಿ" ಪ್ರಮುಖ ಆಕರ್ಷಣೆಯಾಗಿದೆ. ಒಂದು ಪ್ರಸಿದ್ಧ ದಂತ ಕಥೆಯ ಪ್ರಕಾರ, ಕನಕದಾಸರಿಗೆ ದೇವಾಲಯದ ಒಳಗೆ ಪ್ರವೇಶವನ್ನು ನಿರಾಕರಿಸಲ್ಪಟ್ಟಾಗ ಅವರು ಆಲಯದ ಹೊರಗಿನಿಂದಲೇ ಶ್ರೀಕೃಷ್ಣನನ್ನು ಭಕ್ತಿಯಿಂದ ಪ್ರಾರ್ಥಿಸಿದರಂತೆ. ಅವರ ಪ್ರಾರ್ಥನೆಗೆ ಮೆಚ್ಚಿದ ಶ್ರೀ ಕೃಷ್ಣನು ಕನಕದಾಸ ಇರುವ ಕಡೆಗೆ ತನ್ನ ವಿಗ್ರಹವನ್ನು ತಿರುಗಿಸಿ ದರುಶನ ನೀಡಿದನು ಎಂಬುವುದು ಪ್ರತೀತಿ. ಅದನ್ನೇ ‘ಕನಕನ ಕಿಂಡಿ’ ಎಂದು ಕರೆಯಲ್ಪಡುತ್ತದೆ. ಈಗಲೂ ಸಹ ಭಕ್ತರು ಕನಕನ ಕಿಂಡಿಯ ಮೂಲಕ ಮಾತ್ರವೇ ಉಡುಪಿಯ ಶ್ರೀ ಕೃಷ್ಣನನ್ನು ದರ್ಶಿಸಬಹುದು. ಈ ಆಲಯಕ್ಕೆ ದೇಶದ ವಿವಿಧ ಭಾಗಗಳಿಂದ ಹಾಗೂ ವಿದೇಶಗಳಿಂದಲೂ ಕೂಡ ಸಾಕಷ್ಟು ಶ್ರೀ ಕೃಷ್ಣನ ಭಕ್ತರು ಭೇಟಿ ನೀಡುತ್ತಾರೆ. ಕನಕದಾಸ ಜಯಂತಿಯನ್ನು ಉಡುಪಿಯ ಈ ದೇವಾಲಯದಲ್ಲಿ ಸಾಕಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಕನಕದಾಸರು ಸುಮಾರು 316 ಕೀರ್ತನೆಗಳು ಮತ್ತು ಐದು ಪ್ರಮುಖ ಕಾವ್ಯಕೃತಿಗಳನ್ನು ರಚಿಸಿದ್ದು, ಭಕ್ತಿ ಸಾಹಿತ್ಯದ ಜೊತೆಗೆ ಸಾಮಾಜಿಕ ಸಂದೇಶಗಳನ್ನೂ ಸಾರಿದ್ದಾರೆ. ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯಚರಿತೆ, ಹರಿಭಕ್ತಿಸಾರ, ನೃಸಿಂಹಸ್ತವ ಇವುಗಳು ಅವರ ಪ್ರಮುಖ ಕೃತಿಗಳಾಗಿವೆ. ಈ ಕೃತಿಗಳಲ್ಲಿ ಜಾತಿ ಭೇದ, ಸಾಮಾಜಿಕ ಅಸಮಾನತೆ, ಮಾನವೀಯ ಮೌಲ್ಯಗಳ ಮಹತ್ವದ ಬಗ್ಗೆ ಸ್ಪಷ್ಟ ಸಂದೇಶವಿದೆ.
ಕನಕದಾಸರು ಕರ್ನಾಟಕದ ಹರಿದಾಸ ಪರಂಪರೆಯ ಪ್ರಮುಖ ವ್ಯಕ್ತಿಯಾಗಿ, ಪುರಂದರ ದಾಸರು ಮತ್ತು ವ್ಯಾಸರಾಯರ ಮೆಚ್ಚುಗೆಗೆ ಪಾತ್ರರಾದರು. ಸಾಮಾಜಿಕ ಮೌಲ್ಯದ ದೃಷ್ಟಿಯಿಂದ, ಕನಕದಾಸರು ಅಸಾಂಪ್ರದಾಯಿಕ ಆಚರಣೆಗಳನ್ನು ಪ್ರಶ್ನಿಸಿ, ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಧರ್ಮಾಚರಣೆಯ ಅಗತ್ಯತೆಯನ್ನು ಒತ್ತಿಹೇಳಿದ್ದಾರೆ. ತಮ್ಮ ಕೀರ್ತನೆಗಳಲ್ಲಿ ಸತ್ಯ, ಧರ್ಮ, ಮಾನವೀಯತೆ ಮತ್ತು ಭಗವಂತ ಸೇವೆಯನ್ನು ಒತ್ತಿ ತೋರಿದ್ದಾರೆ.
ಒಟ್ಟಿನಲ್ಲಿ, ಕನಕದಾಸರ ಭಕ್ತಿ, ಕೀರ್ತನೆ ಮತ್ತು ಕಾವ್ಯಗಳು ಕನ್ನಡ ಸಾಹಿತ್ಯದ ಅಪಾರ ಸಂಪತ್ತು ಮತ್ತು ತತ್ವಜ್ಞಾನವನ್ನು ಪುರಸ್ಕರಿಸುತ್ತವೆ. ಅವರ ಜೀವನ ಮತ್ತು ಸಾಹಿತ್ಯವು ಇಂದು ಕೂಡ ಸ್ಫೂರ್ತಿದಾಯಕವಾಗಿದ್ದು, ನಿರಂತರ ಪೀಳಿಗೆಗೆ ಶ್ರೇಷ್ಠ ಆದರ್ಶವನ್ನು ನೀಡುತ್ತವೆ.
-ತಾರಾನವೀನ್ ಶೆಟ್ಟಿ ವರ್ಕಾಡಿ