ಮಂಗಳೂರು, ನ. 08 (DaijiworldNews/TA): ಪ್ರಸಿದ್ಧ ಯಕ್ಷಗಾನ ಛಂಧಸ್ಸುಕಾರ ಗಣೇಶ್ ಕೊಲೆಕಾಡಿ (53) ಅವರು ದೀರ್ಘಕಾಲದ ಅಸೌಖ್ಯದಿಂದ ನ. 7 ರಂದು ಮೂಲ್ಕಿ ಅತಿಕಾರಿಬೆಟ್ಟು ಗ್ರಾಮದಲ್ಲಿನ ಸ್ವಗೃಹದಲ್ಲಿ ನಿಧನ ಹೊಂದಿದರು.

ಕೃಷ್ಣಪ್ಪ ಪೂಜಾರಿ-ಪದ್ಮಾವತಿ ಅವರ ಏಕೈಕ ಪುತ್ರರಾಗಿದ್ದ ಅವರು ಪಿಯುಸಿ ಶಿಕ್ಷಣದ ಬಳಿಕ ಪ್ರಸಿದ್ಧ ಛಂದಸ್ಸುಕಾರ ದಿ| ನಾರಾಯಣ ಶೆಟ್ಟಿ ಅವರಲ್ಲಿ ವಿಶೇಷವಾಗಿ ಅಭ್ಯಾಸ ನಡೆಸಿ ಅವರ ಶಿಷ್ಯರಾಗಿ ಪ್ರಖ್ಯಾತಿ ಪಡೆದಿದ್ದರು. ಪಾರ್ತಿಸುಬ್ಬ ಸಹಿತ ಹಲವಾರು ಪ್ರಶಸ್ತಿಗಳು ಅವರಿಗೆ ಲಭಿಸಿದ್ದವು. ಇವರು 60 ಪ್ರಸಂಗಗಳನ್ನು ಯಕ್ಷಗಾನ ಸಾಹಿತ್ಯಲೋಕಕ್ಕೆ ನೀಡಿದ ದಿಗ್ಗಜರು. ರಂಗದಲ್ಲಿ ಪ್ರಯೋಗಗೊಂಡ ಅವರ ಎಲ್ಲ ಪ್ರಸಂಗಗಳು ಯಶಸ್ವಿಯಾಗಿದ್ದವು.
ಶ್ರೀಧಾಮ ಪ್ರಸಂಗವು ಎಡನೀರು ಮೇಳ, ಕಟೀಲು ಮೇಳಗಳಲ್ಲಿ ಯಶಸ್ವಿ ಪ್ರಯೋಗವನ್ನು ಕಂಡರೆ ಸಮರ ಸೌಗಂಧಿಕೆ ಪ್ರಸಂಗವು ಉಭಯ ತಿಟ್ಟುಗಳಲ್ಲಿ ನೂರಾರು ಪ್ರಯೋಗಗಳನ್ನು ಕಂಡಿದೆ. ರಾಜಕಾಕತೀಯ, ನಾಗವೃಜ ಕ್ಷೇತ್ರ ಮಹಾತ್ಮೆ ಪ್ರಸಂಗಗಳು ಪಾವಂಜೆ ಮೇಳದಲ್ಲಿ ಹಲವಾರುಪ್ರದರ್ಶನಗಳನ್ನು ಕಂಡು ಸತ್ಕಿರ್ತಿಗೆ ಪಾತ್ರವಾಗಿವೆ. ಗಣೇಶ್ ಕೊಲೆಕಾಡಿ ಅವರು ಸುಮಾರು 10 ವರ್ಷಗಳ ಕಾಲ ತಮ್ಮ ಮನೆಯಲ್ಲೇ ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷಗಾನ ಶಿಕ್ಷಣ ನೀಡಿದ್ದರು. ತಾಳಮದ್ದಳೆ ಅರ್ಥದಾರಿಯಾಗಿ ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ, ಗುಜರಾತ್ ನಲ್ಲೂ ಕಾರ್ಯಕ್ರಮ ನೀಡಿದ್ದರು.
ಯಕ್ಷಗಾನ ಛಂದಃಪ್ರಪಂಚ -ಒಂದು ಆನ್ವಯಿಕ ಅಧ್ಯಯನ (ಅಪ್ರಕಟಿತ ) ಮತ್ತು ಛಂದೋವೇದ (ಅಪ್ರಕಟಿತ) ಇವರೆಡು ಕೃತಿಗಳು ಅವರ ಸಂಶೋಧನಾತ್ಮಕ ಕೃತಿಗಳಾಗಿವೆ. ಪಾರ್ತಿಸುಬ್ಬ ಪ್ರಶಸ್ತಿ, ಮುದ್ದಣ ಪುರಸ್ಕಾರ, ನೆಡ್ಲೆ ನರಸಂಹ ಭಟ್ಟ ಪ್ರಶಸ್ತಿ, ಶೇಣಿ ಪ್ರಶಸ್ತಿ, ತಲ್ಲೂರು ಕನಕ ಅಣ್ಣಯ್ಯ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿವೆ.