ಮಂಗಳೂರು, ನ. 07 (DaijiworldNews/AA): ಬಜ್ಪೆ ಸಮೀಪದ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೌಹಾರ್ದ ನಗರದಲ್ಲಿ ಗುರುವಾರ 6 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು, ಬಾಲಕ ಗಾಯಗೊಂಡಿದ್ದಾನೆ.

ಗಾಯಗೊಂಡ ಬಾಲಕನನ್ನು ಸೌಹಾರ್ದ ನಗರದ ನಿವಾಸಿ ಮುಹಮ್ಮದ್ ಅಝರ್ ಅವರ ಪುತ್ರ ಅಹಿಲ್ ಎಂದು ಗುರುತಿಸಲಾಗಿದೆ.
ಅಹಿಲ್ ಮದರಸದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಬೀದಿ ನಾಯಿಗಳ ಗುಂಪೊಂದು ದಿಢೀರನೇ ಬಾಲಕನನ್ನು ಸುತ್ತುವರಿದು ದಾಳಿ ಮಾಡಿದೆ. ನಾಯಿಗಳು ಬಾಲಕನ ಕೆನ್ನೆ ಮತ್ತು ಕೈಗೆ ಕಚ್ಚಿ ಗಂಭೀರ ಗಾಯಗೊಳಿಸಿದೆ.
ಬಾಲಕನ ಬೊಬ್ಬೆ ಕೇಳಿದ ತಾಯಿ ತಕ್ಷಣ ಮನೆಯಿಂದ ಹೊರಗೆ ಓಡಿ ಬಂದು ಮಗನನ್ನು ರಕ್ಷಿಸಿದ್ದಾರೆ. ತಕ್ಷಣವೇ ಬಾಲಕನನ್ನು ಬಜ್ಪೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಕಟೀಲಿನ ದುರ್ಗ ಸಂಜೀವಿನಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯ ಬಗ್ಗೆ ಮಾತನಾಡಿದ ಬಾಲಕನ ಚಿಕ್ಕಪ್ಪ, ಮುಹಮ್ಮದ್ ಮುಝಮ್ಮಿಲ್ ಅವರು, ಪ್ರದೇಶದಲ್ಲಿ ಪದೇ ಪದೇ ನಡೆಯುತ್ತಿರುವ ಬೀದಿ ನಾಯಿಗಳ ಹಾವಳಿಯಿಂದ ಬೇಸರ ವ್ಯಕ್ತಪಡಿಸಿದರು. "ಕಳೆದ ಮೂರು ವರ್ಷಗಳಿಂದ ಬೀದಿ ನಾಯಿಗಳ ದಾಳಿಯಿಂದ ನಿವಾಸಿಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳುವಂತೆ ನಾವು ಕಂದಾವರ ಗ್ರಾಮ ಪಂಚಾಯತ್ಗೆ ಮನವಿ ಮಾಡುತ್ತಿದ್ದೇವೆ. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಶ್ನಿಸಿದಾಗ, ಅಧಿಕಾರಿಗಳು ಬೀದಿ ನಾಯಿಗಳನ್ನು ಕೊಲ್ಲುವುದನ್ನು ನಿರ್ಬಂಧಿಸುವ ನ್ಯಾಯಾಲಯದ ಆದೇಶಗಳನ್ನು ಉಲ್ಲೇಖಿಸುತ್ತಾರೆ" ಎಂದು ಅವರು ಹೇಳಿದ್ದಾರೆ.