ಕಾಸರಗೋಡು, ನ. 04 (DaijiworldNews/AA): ಸ್ಕೂಟರ್ ಹಾಗೂ ಕಾರಿನ ನಡುವೆ ಉಂಟಾದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ಸೋಮವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಪೆರುವಾಡ್ ನಲ್ಲಿ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.




ಆರಿಕ್ಕಾಡಿ ಪಾರೆಸ್ಥಾನ ಸಮೀಪದ ಎನ್.ಹರೀಶ್ ಕುಮಾರ್ (37) ಮೃತ ದುರ್ದೈವಿ. ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಪಟ್ಟ ಹರೀಶ್ ಬಿಜೆಪಿ ಕಾರ್ಯಕರ್ತರಾಗಿದ್ದರು. ಅಪಘಾತದಿಂದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ಪಲ್ಟಿಯಾಗಿದೆ. ಗಾಯಗೊಂಡ ಹರೀಶ್ ಕುಮಾರ್ ರನ್ನು ಕುಂಬಳೆಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಲಾಗಲಿಲ್ಲ.
ಸ್ಕೂಟರ್ ಕಾಸರಗೋಡಿನಿಂದ ಕುಂಬಳೆ ಕಡೆಗೆ ತೆರಳುತ್ತಿತ್ತು. ಕಾರು ಕುಂಬಳೆಯಿಂದ ಕಾಸರಗೋಡಿಗೆ ಬರುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ.
ಅಪಘಾತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಸಮಯ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕಾರಿನ ಆಯಿಲ್ ಟ್ಯಾಂಕ್ ನಿಂದ ಸೋರಿಕೆ ಉಂಟಾದ ಹಿನ್ನಲೆಯಲ್ಲಿ ಎರಡೂ ಗಂಟೆಗೂ ಅಧಿಕ ಸಮಯ ವಾಹನ ಸಂಚಾರಕ್ಕೂ ಅಡ್ಡಿಯಾಯಿತು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ರಸ್ತೆ ಸಂಚಾರ ಸುಗಮ ಗೊಳಿಸಿದರು. ಈ ನಡುವೆ ಚಿಕಿತ್ಸೆಯಲ್ಲಿ ಲೋಪ ಉಂಟಾಗಿದ್ದು, ಸೂಕ್ತ ಚಿಕಿತ್ಸೆ ಲಭಿಸದ ಹಿನ್ನಲೆಯಲ್ಲಿ ಗಾಯಾಳು ಮೃತಪಟ್ಟಿರುವುದಾಗಿ ಆರೋಪಿಸಿ ಬಿಜೆಪಿ ನೇತೃತ್ವದಲ್ಲಿ ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.