ಪುತ್ತೂರು, ನ. 04 (DaijiworldNews/AA): ನಾಲ್ಕು ತಿಂಗಳ ಹಿಂದೆ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುರ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮೃತಪಟ್ಟ ಒಂದು ತಿಂಗಳೊಳಗೆ ಗಾಯಾಳು ತಂದೆಯೂ ನ.3ರಂದು ಸಾವನ್ನಪ್ಪಿದ್ದಾರೆ.

ಮೇ 27 ರಂದು ಖಾಸಗಿ ಬಸ್ ಮತ್ತು ಕಾರಿನ ನಡುವೆ ಈ ಅಪಘಾತ ಸಂಭವಿಸಿತ್ತು. ಈ ಘಟನೆಯಲ್ಲಿ ಅಂಡೆಪುಣಿ ಈಶ್ವರ ಭಟ್ ಅವರ ಮಗಳು ಅಪೂರ್ವಾ (35) ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅಕ್ಟೋಬರ್ 7 ರಂದು ನಿಧನರಾಗಿದ್ದರು. ಇದೀಗ ಗಂಭೀರವಾಗಿ ಗಾಯಗೊಂಡಿದ್ದ ಅವರ ತಂದೆ, ಈಶ್ವರ ಭಟ್ (75), ಅವರು ಕೂಡ ನವೆಂಬರ್ 3 ರಂದು ಪುತ್ತೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅಪಘಾತ ಸಂಭವಿಸಿದ ದಿನ, ಈಶ್ವರ ಭಟ್ ಮತ್ತು ಅವರ ಮಗಳು ಅಪೂರ್ವ ಅವರು ಪುತ್ತೂರು ಪಟ್ಟಣದಿಂದ ತಮ್ಮ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ, ಪುತ್ತೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಮುರ ಸಮೀಪ ಅವರ ಕಾರಿಗೆ ಢಿಕ್ಕಿ ಹೊಡೆದಿತ್ತು. ತಂದೆ ಹಾಗೂ ಮಗಳು ಗಂಭೀರವಾಗಿ ಗಾಯಗೊಂಡರೆ, ಅಪೂರ್ವಾ ಅವರ 3 ವರ್ಷದ ಮಗಳು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಳು. ತಂದೆ ಮತ್ತು ಮಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚೇತರಿಸಿಕೊಂಡಿದ್ದ ಈಶ್ವರ ಭಟ್ ಅವರನ್ನು ಪುತ್ತೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಅಪೂರ್ವಾ ಅವರು ಈ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.