ಮಂಗಳೂರು,ನ. 03 (DaijiworldNews/AK): ನಶಾ ಮುಕ್ತ ಭಾರತ ಅಭಿಯಾನ ಅಡಿಯಲ್ಲಿ ಲಿಂಕ್ ಆಂಟಿ ಅಡಿಕ್ಷನ್ ಸಿಟಿಜನ್ಸ್ ಕಮಿಟಿ (ರಿ), ಬಜಾಲ್ ವತಿಯಿಂದ ದಿವಂಗತ ಡಾ. ಒಲಿಂಡಾ ಪಿರೇರಾ ಅವರ ಜನ್ಮಶತಮಾನೋತ್ಸವದ ಸ್ಮಾರಣಾರ್ಥ, ಯುವಜನತೆಗೆ ಮತ್ತು ಮಕ್ಕಳಿಗೆ ಕ್ರೀಡಾಕೂಟವನ್ನು ಬಜಾಲ್ ಹೋಲಿ ಸ್ಪಿರಿಟ್ ಚರ್ಚ್ ಮೈದಾನದಲ್ಲಿ ಭವ್ಯವಾಗಿ ಆಯೋಜಿಸಲಾಯಿತು.





ಬೆಳಿಗ್ಗೆ 10.45 ಕ್ಕೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಡಾ. ಸತೀಶ್ ರಾವ್, ಲಿಂಕ್ ಆಡಳಿತ ಮಂಡಳಿಯ ಗೌರವಾಧ್ಯಕ್ಷರು, ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಫಾ. ಲಿಯೋ ವಿಲಿಯಂ ಲೋಬೋ, ಧರ್ಮ ಗುರುಗಳು, ಹೋಲಿ ಸ್ಪಿರಿಟ್ ಚರ್ಚ್ ಬಜಾಲ್; ಶ್ರೀಮತಿ ಗಾಯತ್ರಿ ಸಿ.ಹೆಚ್, ಉಪ ಆಯುಕ್ತರು, ಅಬಕಾರಿ ಇಲಾಖೆ ಮಂಗಳೂರು ಉಪವಿಭಾಗ; ಶ್ರೀ ಸುನೀಲ್ ಕುಮಾರ್ ಬಜಾಲ್, ಸಾಮಾಜಿಕ ಹೋರಾಟಗಾರರು ಹಾಗೂ ಶ್ರೀ ಹಸನ್, ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಸುನೀಲ್ ಕುಮಾರ್ ಬಜಾಲ್, ಶ್ರೀ ಹಸನ್ ಹಾಗೂ ಶ್ರೀ ವಿಲ್ಫ್ರೆಡ್ ಮೊಂತೇರೊ ಇವರ ಸಾಮಾಜಿಕ ಕಾರ್ಯವನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಾಲಿಬಾಲ್ (ಪುರುಷರು/ಮಕ್ಕಳು), ಥ್ರೋಬಾಲ್ (ಮಹಿಳೆಯರು), ಹಗ್ಗಜಗ್ಗಾಟ (ಪುರುಷರು/ಮಹಿಳೆಯರು/ಮಕ್ಕಳು), ಶಾಟ್ಪುಟ್ (ಪುರುಷರು/ಮಹಿಳೆಯರು) ಹಾಗೂ ಇತರೆ ವೈಯಕ್ತಿಕ ಕ್ರೀಡೆಗಳು ನಡೆದವು. ಸ್ಪರ್ಧಿಗಳು ಅಪಾರ ಉತ್ಸಾಹದಿಂದ ಭಾಗವಹಿಸಿ ಕ್ರೀಡಾ ಮನೋಭಾವ ಹಾಗೂ ತಂಡಸ್ಫೂರ್ತಿ ಪ್ರದರ್ಶಿಸಿದರು.
ವಾಲಿಬಾಲ್ ಮತ್ತು ತ್ರೋಬಾಲ್ ವಿಭಾಗದಲ್ಲಿ ಬೆಸ್ಟ್ ಸ್ಮ್ಯಾಷರ್, ಬೆಸ್ಟ್ ಪಾಸರ್, ಬೆಸ್ಟ್ ಸರ್ವರ್, ಬೆಸ್ಟ್ ರಿಸೀವರ್, ಬೆಸ್ಟ್ ಆಲ್ರೌಂಡರ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಎಲ್ಲಾ ವಿಜೇತರಿಗೆ ಪದಕ, ಟ್ರೋಫಿಗಳು ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ “ನಶಾ ಮುಕ್ತ ಭಾರತ” ಸಹಿ ಅಭಿಯಾನವೂ ಜರುಗಿತು. ಮುಖ್ಯ ಅತಿಥಿಗಳಾದ ಶ್ರೀಮತಿ ಗಾಯತ್ರಿ ಸಿ.ಹೆಚ್ ಪ್ರಮಾಣ ವಚನ ಬೋಧಿಸಿದರು. ಎಲ್ಲಾ ಅತಿಥಿಗಳು, ಸ್ಥಳೀಯ ನಾಗರಿಕರು, ಯುವಕರು ಮತ್ತು ವಿದ್ಯಾರ್ಥಿಗಳು ಸಹಿ ಮಾಡುವುದರ ಮೂಲಕ ವ್ಯಸನರಹಿತ ಭಾರತದತ್ತ ತಮ್ಮ ಬೆಂಬಲವನ್ನು ಸೂಚಿಸಿದ ಡಾ. ಸತೀಶ್ ರಾವ್ ನಾವೆಲ್ಲರೂ ವ್ಯಸನ ಮುಕ್ತ ಸಮಾಜವನ್ನು ನಿರ್ಮಿಸಲು ನಿರಂತರ ಶ್ರಮಿಸಬೇಕು ಎಂದು ಕರೆಯಿತ್ತರು.ಈ ಅಭಿಯಾನವು ಜನರಲ್ಲಿ ಜಾಗೃತಿ ಮೂಡಿಸಿ, ವ್ಯಸನಮುಕ್ತ ಜೀವನದ ಮಹತ್ವವನ್ನು ನೆನಪಿಸಿತು.
ಸಂಜೆ 7.30 ಗಂಟೆಗೆ ಮುಖ್ಯ ಅತಿಥಿಗಳಾಗಿ ಮಡಿಲು ಸೇವಾ ತಂಡದ ಅಧ್ಯಕ್ಷ ಶ್ರೀ ಗಜೇಂದ್ರ, ಕಾಯದರ್ಶಿ ಶ್ರೀ ಬಾಲಚಂದ್ರ, ಹಾಗೂ ಸ್ವಚ್ಚ ಭಾರತ ಕಾಲ್ನಡಿಗೆ ಅಭಿಯಾನದ ಶ್ರೀ ನಾಗರಾಜ್, ಬಜಾಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಥಿತಿಗಳನ್ನು ಸನ್ಮಾನಿಸಲಾಯಿತು. ಹೋಲಿ ಸ್ಪಿರಿಟ್ ಚರ್ಚ್ ಬಜಾಲ್ ಇದರ ಗುರುಗಳಾದ ಜೋಯಲ್ ಮೊಂತೇರೊ, ಲಿಂಕ್ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಸಂತೋಷ್ ಡಿಸೋಜ, ಆಡಳಿತಾಧಿಕಾರಿ ಶ್ರೀಮತಿ ಲೀಡಿಯಾ ಲೋಬೊ ಮತ್ತು ಅಥಿತಿಗಳು ಪದಕ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿದರು.
ಕಾರ್ಯಕ್ರಮವನ್ನು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಬೆಂಬಲದೊಂದಿಗೆ ಆಯೋಜಿಸಲಾಯಿತು. ಈ ಕಾರ್ಯಕ್ರಮವು “ಕ್ರೀಡೆಯಲ್ಲಿ ಭಾಗವಹಿಸಿ ಆರೋಗ್ಯಕರ ಮತ್ತು ವ್ಯಸನರಹಿತ ಜೀವನವನ್ನು ಅನುಸರಿಸಬೇಕು” ಎಂಬ ಸಂದೇಶವನ್ನು ನೀಡಿತು. ಆಡಳಿತಾಧಿಕಾರಿ ಶ್ರೀಮತಿ ಲೀಡಿಯಾ ಲೋಬೊ ಸ್ವಾಗತಿಸಿ, ಡಾ. ಅನಿತಾ ಡಿಸೋಜ ವಂದನಾರ್ಪಣೆಗೈದರು. ಡಾ.ಬಿಂದುರಾಣಿ ಕಾರ್ಯಕ್ರಮ ನಿರೂಪಿಸಿದರು.