ಮಂಗಳೂರು, ಅ. 30(DaijiworldNews/TA): ಸಂಗೀತ ಶಿಕ್ಷಕ ರುಬೆನ್ ಜೇಸನ್ ಮಚಾದೊ ಅವರು ಮಂಗಳೂರಿನ ಸಂತ ಅಲೋಶಿಯೆಸ್ ಪರಿಗಣಿತ ವಿವಿಯ ಈಜು ಕೊಳದಲ್ಲಿ ಕೊಳಲನ್ನು ನುಡಿಸುತ್ತಾ ಸುಮಾರು 700 ಮೀಟರ್ಗೂ ಅಧಿಕ ದೂರವನ್ನು ಹಿಂದಕ್ಕೆ ಈಜುತ್ತಾ ಸಾಗುವ ಮೂಲಕ ಬ್ಯಾಕ್ ಸ್ಟ್ರೋಕ್ ಸ್ವಿಮ್ ಮಾಡುವ ಗೋಲ್ಡನ್ ಬುಕ್ ಆಫ್ ವರ್ಲ್ಡ್ ದಾಖಲೆ ಬರೆದಿದ್ದಾರೆ.


29ರ ಹರೆಯದ ಸಂಗೀತಗಾರ ಮಚಾದೊ ಸ್ವಿಮ್ಮಿಂಗ್ ಪೂಲ್ನಲ್ಲಿ ಬುಧವಾರ ಬೆಳಗ್ಗೆ 10 ಗಂಟೆಗೆ ಕೊಳಲು ವಾದನದೊಂದಿಗೆ ಈಜು ಆರಂಭಿಸಿ 5 ಸುತ್ತು ಮತ್ತು 75 ಮೀ. ಪೂರ್ಣಗೊಳಿಸಿ ದಾಖಲೆ ಬರೆದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸಂಸ್ಥೆಯು ಇವರ ಸಾಧನೆ ಗುರುತಿಸಿ, ಅಧಿಕೃತ ಪ್ರಮಾಣ ಪತ್ರ ಪ್ರದಾನ ಮಾಡಿದೆ. ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ವಾಟರ್ ಸೇಫ್ಟಿ ತಂಡದ ಅಧೀಕೃತ ಲೈಫ್ ಸೇವರ್ ಆಗಿರುವ ರುಬೆನ್ ರುಬೆನ್ ಜೇಸನ್ ಮಚಾದೊ ಅವರು ಹಿಂದೂಸ್ತಾನಿ ಕೊಳಲು ಮತ್ತು ವೆಸ್ಟರ್ನ್ ಫ್ಲೂಟ್ನಲ್ಲಿ ಪರಿಣತರು.
ಸ್ಯಾಕ್ಸೋಫೋನ್, ಗಿಟಾರ್ ಮತ್ತು ಇತರ ವಾದ್ಯಗಳನ್ನೂ ನುಡಿಸುವುದರಲ್ಲಿ ಖ್ಯಾತರಾಗಿದ್ದಾರೆ. ರುಬೆನ್ ಜೇಸನ್ ಮಚಾದೊ ಬಾಲಿವುಡ್, ಸ್ಯಾಂಡಲ್ವುಡ್ ಮತ್ತು ಕೋಸ್ಟಲ್ ಚಲನಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಭಾರತದಾದ್ಯಂತ ಪ್ರಮುಖ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿರುವ ಅವರು 2016ರಲ್ಲಿ ನಡೆದ ವರ್ಲ್ಡ್ ಕಲ್ಚರ್ ಫೆಸ್ಟಿವಲ್ನಲ್ಲಿ 150ಕ್ಕೂ ಹೆಚ್ಚು ದೇಶಗಳ ಸಂಗೀತಗಾರರೊಂದಿಗೆ ಗಿನ್ನೆಸ್ ವಿಶ್ವ ದಾಖಲೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಂತ ಅಲೋಸಿಯಸ್ ಕಾಲೇಜಿನಲ್ಲಿ ಸುಮಾರು ಎರಡು ವರ್ಷಗಳ ಕಾಲ ಪತ್ರಿಕೋದ್ಯಮ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ರುಬೆನ್ ಕೊಳಲು ವಾದನದಲ್ಲಿ 15 ವರ್ಷಗಳ ಅನುಭವ ಹೊಂದಿದ್ದಾರೆ. ಇನ್ನು ದಾಖಲೆಯ ಸಂದರ್ಭ ಸಂತ ಅಲೋಶಿಯೆಸ್ ಪರಿಗಣಿತ ವಿವಿ ಉಪಕುಲಪತಿ ಡಾ. ಪ್ರವೀಣ್ ಮಾರ್ಟಿಸ್, ರುಬೆನ್ ಅವರ ಪತ್ನಿ ಅನುಷಾ ಮತ್ತು ಕುಟುಂಬ ಸದಸ್ಯರು ಉಪಸ್ಥಿತರಿದ್ದರು.