ಬೆಳ್ತಂಗಡಿ, ಅ. 30(DaijiworldNews/TA): ಕನ್ಯಾಡಿ ಸೇವಾ ಧಾಮದ ಸಮೀಪದ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಅಸ್ಪತ್ರೆಯಲ್ಲಿ ಸಾವನ್ನಪ್ಪಿದ ದುರ್ಘಟನೆ ಅಕ್ಟೋಬರ್ 29ರಂದು ನಡೆದಿದೆ.

ನಾವೂರು ಗ್ರಾಮದ ಹೊಡಿಕ್ಕಾರು ಗಂಗಯ್ಯ ಎಂಬವರ ಪುತ್ರ, ಬೈಕ್ ಸವಾರ ಚಂದ್ರಹಾಸ (28) ಮೃತರು ಎಂದು ಗುರುತಿಸಲಾಗಿದೆ. ಚಂದ್ರಹಾಸ ಅವರು ಸತೀಶ್ ಎಂಬವರ ಜತೆ ಸೇರಿ ಟೈಲ್ಸ್ ಹಾಕುವ ಕೆಲಸವನ್ನು ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದರು. ಅ.29ರಂದು ಬೆಳಿಗ್ಗೆ ಧರ್ಮಸ್ಥಳ ಕಡೆ ಕೆಲಸಕ್ಕಾಗಿ ತನ್ನ ಬೈಕ್ನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಇಲ್ಲಿಯ ಸೇವಾ ಧಾಮದ ಸಮೀಪ ಧರ್ಮಸ್ಥಳ ಕಡೆಯಿಂದ ಉಜಿರೆ ಕಡೆಗೆ ಬರುತ್ತಿದ್ದ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಅಪಘಾತದ ರಭಸಕ್ಕೆ ಬೈಕ್ನಿಂದ ರಸ್ತೆಗೆ ಎಸೆಯಲ್ಪಟ್ಟ ಚಂದ್ರಹಾಸ್ ಅವರ ತಲೆ ಹಾಗೂ ಕಾಲಿಗೆ ಏಟು ತಗಲಿ ಗಂಭೀರ ಗಾಯಗೊಂಡಿದ್ದು, ಕೂಡಲೇ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು .ಅಲ್ಲಿ ಅವರ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.