ಬಂಟ್ವಾಳ, ಅ. 30(DaijiworldNews/TA): ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ ಬಂಟ್ವಾಳ ನಂ.೧ ಮತ್ತು ನಂ. ೨ ಉಪವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆ ಬಿ.ಸಿ.ರೋಡ್ ನಲ್ಲಿರುವ ಮೆಸ್ಕಾಂ ಭವನದಲ್ಲಿ ನಡೆಯಿತು. ಪ್ರಭಾರ ಎಕ್ಸಿಕ್ಯುಟಿವ್ ಎಂಜಿನಿಯರ್ ಸಂತೋಷ್ ನಾಯಕ್ ಆಗಮಿಸಿದ ಬಳಕೆದಾರರ ಸಲಹೆ ಸೂಚನೆಗಳನ್ನು ಸ್ವೀಕರಿಸಿ, ಅಹವಾಲುಗಳ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು.

ಬಳಕೆದಾರರ ಪರವಾಗಿ ಮಾತನಾಡಿದ ಲಕ್ಷ್ಮೀನಾರಾಯಣ ಬಂಟ್ವಾಳ, ಮೆಸ್ಕಾಂ ಸಾರ್ವಜನಿಕರಿಂದ ಎಲ್ಲವನ್ನೂ ಪಡೆಯುತ್ತಿದೆ, ಆದರೆ ಸಾರ್ವಜನಿಕರಿಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿ, ಕಚೇರಿಗೆ ಆಗಮಿಸುವವರಲ್ಲಿ ಯಾರು ಕಾಯಂ, ಯಾರು ಗುತ್ತಿಗೆ ನೌಕರರು ಎಂದು ಗೊತ್ತಾಗುವುದಿಲ್ಲ. ಸಮಯಕ್ಕೆ ಸರಿಯಾಗಿ ಸಿಬ್ಬಂದಿ ಆಗಮಿಸುತ್ತಿಲ್ಲ. ಸಾರ್ವಜನಿಕರ ದುಡ್ಡಿಗೆ ನ್ಯಾಯ ದೊರಕುತ್ತಿಲ್ಲ. ನಿವೃತ್ತರ ಪಿಂಚಣಿಗೂ ಜನರ ದುಡ್ಡನ್ನು ಪಡೆಯಲಾಗುತ್ತಿದೆ ಎಂದರು.
ಬಳಕೆದಾರರ ಪರವಾಗಿ ಜೆರಾಲ್ಡ್ ಡಿಸೋಜ ಮಾತನಾಡಿ, ತಲಪಾಡಿ ಸ್ಟೇಶನ್ ನಿಂದ ಕುಡಿಯುವ ನೀರು ಸರಬರಾಜು ಸ್ಥಾವರಕ್ಕೆ ವಿದ್ಯುತ್ ತಂತಿಗಾಗಿ ಪೈಪ್ ಹಾಕಿದ ವಿಧಾನ ಸರಿ ಇಲ್ಲ, ನಾಳೆ ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಸಾರ್ವಜನಿಕರಾದ ಅಮ್ಟಾಡಿ ಏರ್ಯ ಸತೀಶ್, ಮೆಲ್ವಿನ್ ಲೋಬೊ, ಗಿರಿಧರ ಪ್ರಭು ವಿವಿಧ ಅಹವಾಲು ಮಂಡಿಸಿದರು. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎದುರು ಹೈವೋಲ್ಟೇಜ್ ವಯರ್ ನಿಂದ ಆಗುವ ಸಮಸ್ಯೆ ಕುರಿತು ಸಾರ್ವಜನಿಕರು ದೂರಿದರು. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರುಗಳಾದ ನಾರಾಯಣ ಭಟ್, ಸುಬ್ರಹ್ಮಣ್ಯ ಪ್ರಸಾದ್, ಪ್ರಭಾರ ಅಕೌಂಟ್ಸ್ ಆಫೀಸರ್ ಚಂದ್ರಶೇಖರ್ ಉಪಸ್ಥಿತರಿದ್ದರು.