ಮಂಗಳೂರು,ಅ. 29 (DaijiworldNews/AK): ಎಲ್ಲಾ ರೋಗಕ್ಕೂ ಮದ್ದು ಇದೆ, ಅಸೂಯೆಗೆ ಮದ್ದಿಲ್ಲ. ಕರ್ನಾಟಕದ ಶಾಸಕಾಂಗದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಗೌರವವಿದೆ. ಹಾಗಾಗಿ ಮಾಜಿ ಸ್ಫೀಕರ್ ಅವರು ಮಾಡಿರುವ ಭ್ರಷ್ಟಾಚಾರದ ಆರೋಪಗಳು ನಮ್ಮ ಶಾಸಕಾಂಗದ ಮೇಲೆ ದೃಷ್ಠಿ ಬೊಂಬೆಯಂತೆ ಇದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ. ತನ್ನ ಮೇಲೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಡಿರುವ ಭ್ರಷ್ಟಾಚಾರದ ಆರೋಪಕ್ಕೆ ಖಾದರ್ ಈ ಮೂಲಕ ತಿರುಗೇಟು ನೀಡಿದ್ದಾರೆ.

ನನ್ನ ವಿರುದ್ಧ ಬಂದಿರುವ ಆರೋಪಗಳು ಇದೇನೂ ಮೊದಲಲ್ಲ. ಶಾಸಕನಾಗಿದ್ದ ವೇಳೆ ಕೂಡ ಈ ರೀತಿಯ ಆರೋಪಗಳು ಬರುತ್ತಲೇ ಇದ್ದವು. ಆದರೆ ಕ್ಷೇತ್ರದ ಜನರು ನನ್ನನ್ನು ಇನ್ನೂ ಮುಂದಕ್ಕೆ ತೆಗೆದುಕೊಂಡು ಹೋಗುವ ವಿಶ್ವಾಸವಿದೆ. ಅಭಿವೃದ್ದಿ ಎಂಬುದು ನಿರಂತರವಾಗಿದ್ದು, ಹಂತ ಹಂತವಾಗಿ ನಡೆಯಲಿದೆ.
ಯಾರಿಗಾದರೂ ಅದರ ಬಗ್ಗೆ ಸಂಶಯಗಳಿದ್ದರೆ ನೇರವಾಗಿ ನನ್ನ ಕಚೇರಿಗೆ ಬಂದು ಸಂಶಯ ನಿವಾರಿಸಿಕೊಳ್ಳಬಹುದು. ಅವರ ಜೊತೆ ಸಕಾರಾತ್ಮಕ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದ ಖಾದರ್, ಸ್ಪೀಕರ್ ಕಚೇರಿ ವಿಚಾರ ಮಾಹಿತಿ ಹಕ್ಕು ವ್ಯಾಪ್ತಿಗೆ ಒಳಪಡಬೇಕೆಂಬ ಆಗ್ರಹದ ಬಗ್ಗೆ ಕೂಡ ಪ್ರತಿಕ್ರಿಯೆ ನೀಡಿದರು. ಎಲ್ಲೋ ಕುಳಿತುಕೊಂಡು ಹೇಳಿಕೆ ನೀಡಿದರೆ ಆಗಲ್ಲ. ನನ್ನ ಕಚೇರಿಗೆ ಬಂದು ಇದರ ಬಗ್ಗೆ ಸಮಗ್ರವಾಗಿ ಚರ್ಚೆಗೆ ಬನ್ನಿ ಎಂದು ಆಗ್ರಹಿಸಿದರು.
ಅಲ್ಲದೆ ನನಗೆ ಲಿಖಿತವಾಗಿ ಮನವಿ ನೀಡಿದರೆ ಖಂಡಿತವಾಗಿಯೂ ಪರಿಶೀಲನೆ ನಡೆಸುತ್ತೇನೆ. ರಾಜಕೀಯವಾಗಿ ಹೇಳಲು ನನಗೂ ಕೂಡ ಬಹಳಷ್ಟು ವಿಚಾರಗಳಿವೆ. ಆದರೆ ನಾನು ಸಂವಿಧಾನಬದ್ದವಾದ ಸ್ಪೀಕರ ಹುದ್ದೆಯಲ್ಲಿ ಇದ್ದೇನೆ. ಹಾಗಾಗಿ ರಾಜಕೀಯವಾಗಿ ಎಲ್ಲವನ್ನೂ ಹೇಳಲು ಆಗುವುದಿಲ್ಲ. ನಮ್ಮ ಶಾಸಕರಿಗೆ ಯಾವ ಸವಲತ್ತುಗಳು ಲಭಿಸಬೇಕು. ಅವೆಲ್ಲವೂಗಳನ್ನು ಕೊಡುವುದು ನನ್ನ ಕರ್ತವ್ಯ, ಅದನ್ನು ನಾನು ಮಾಡುತ್ತೇನೆ. ಆರೋಪಗಳಿಂದ ಅವರಿಗೆ ಸಂತೋಷ ಸಿಗುವುದಾದರೆ ದಿನಾ ಈ ರೀತಿಯ ಆರೋಪಗಳನ್ನು ಮಾಡುತ್ತಲೇ ಇರಲಿ ಎಂದು ಖಾದರ್ ಹೇಳಿದರು.