ಮಂಗಳೂರು, ಅ. 29 (DaijiworldNews/AK):ನಿಟ್ಟೆ (ಪರಿಗಣಿತ) ವಿಶ್ವವಿದ್ಯಾಲಯದ ಅಂಗಸಂಸ್ಥೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಲತ್ರೆಯಲ್ಲಿ ಎಂಆರ್ ಐ ನೂತನ ಯಂತ್ರ '3- ಟೆಸ್ಲಾ' ಉದ್ಘಾಟನಾ ಸಮಾರಂಭ ಬುಧವಾರ ನಡೆಯಿತು.



ಮಂಗಳೂರಿನಲ್ಲಿ ಮೊದಲ ಬಾರಿಗೆ ಈ ಯಂತ್ರ ಅಳವಡಿಸಿದ ಆಸ್ಪತ್ರೆ ಎನ್ನುವ ಕೀರ್ತಿಗೆ ಕೆ.ಎಸ್.ಹೆಗ್ಡೆ ಪಾತ್ರವಾಗಿದೆ. ಹಿಂದೆ 1.5 ಎಂಆರ್ ಐ ಯಂತ್ರ ಕಾರ್ಯನಿರ್ವಹಿಸುತ್ತಿದ್ದರೆ ಈಗ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಯಂತ್ರ '3-ಟೆಸ್ಲಾ' ಅಳವಡಿಸಲಾಗಿದೆ.
ಮೆದುಳು, ಬೆನ್ನು, ದೇಹದ ಯಾವುದೇ ಭಾಗದಲ್ಲಿರುವ ಕಾಯಿಲೆ ಪತ್ತೆ ಹಚ್ಚಲು ಈ ಯಂತ್ರ ಹಿಂದಿನ ಯಂತ್ರಕ್ಕಿಂತ ಹೆಚ್ಚು ಕ್ಷಮತೆಯಿಂದ ಕಾರ್ಯನಿರ್ವಹಿಸಲಿದೆ. ಮನುಷ್ಯ ಮೆದುಳಿನಲ್ಲಿ ಟ್ಯೂಮರ್ ಇದ್ದರೆ ಆಸುಪಾಸು ವ್ಯಾಪಿಸಿರುವ ಹಾಗೂ ಮೆದುಳಿನ ಕಾರ್ಯವೈಖರಿ ಅರಿಯಲು ನೂತನ ಯಂತ್ರ ಅತ್ಯಂತ ಉಪಯುಕ್ತ. ಅಲ್ಲದೆ ಈ ಯಂತ್ರ ಅತ್ಯಂತ ತ್ವರಿತವಾಗಿ ರೋಗ ಪತ್ತೆ ಹಚ್ಚಲಿದೆ. ಯಂತ್ರಕ್ಕೆ ಅಳವಡಿಸಿರುವ ಟಿವಿ ಮೋನಿಟರ್ ಹಾಗೂ ಇತರ ವ್ಯವಸ್ಥೆ ಮೂಲಕ ರೋಗಿಗೆ ಸ್ಕ್ಯಾನ್ ಮಾಡುವುದು ವೀಕ್ಷಿಸಲು ಹಾಗೂ ಸಂಗೀತ ಆಲಿಸಲು ಸಾಧ್ಯವಿದ್ದು ಅತ್ಯಂತ ಸುಲಭ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ.
ಒಂದು ವಾರದಲ್ಲಿ ಅಯಸ್ಕಾಂತೀಯ ಗುಣ ತುಂಬಿ ಕಾರ್ಯ ಆರಂಭಿಸಲಾಗುವುದು ಎಂದು ಆಸ್ಪತ್ರೆಯ ರೇಡಿಯಾಲಜಿ ವಿಭಾಗ ಮುಖ್ಯಸ್ಥ ಡಾ.ರಘುರಾಜ್ ಮಾಹಿತಿ ನೀಡಿದರು.