ಬೆಳ್ತಂಗಡಿ, ಅ. 29 (DaijiworldNews/AA): ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ಬಳಿಯ ಖಾಸಗಿ ರಬ್ಬರ್ ತೋಟದ ಶೆಡ್ನೊಳಗೆ ನಡೆಯುತ್ತಿದ್ದ ಅಕ್ರಮ ಗೋಮಾಂಸ ಅಡ್ಡೆಗೆ ದಾಳಿ ನಡೆಸಿದ ಬೆಳ್ತಂಗಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, 91 ಕೆಜಿ ಗೋಮಾಂಸ ಹಾಗೂ ಮಾಂಸ ಮಾಡಲು ಉಪಯೋಗಿಸುತ್ತಿದ್ದ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟುವಿನ ಅಬ್ದುಲ್ ನಝೀರ್ (36) ಮತ್ತು ಮಿತ್ತಬಾಗಿಲು ಗ್ರಾಮದ ಝಕಾರಿಯಾ (36) ಎಂದು ಗುರುತಿಸಲಾಗಿದೆ.
ನಿರೀಕ್ಷಕ ಸುಬ್ಬಪುರ್ ಮಠ ಅವರ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ಪೊಲೀಸ್ ಠಾಣೆಯ ಪಿಎಸ್ಐ ಆನಂದ್ ಎಂ ಮತ್ತು ವೇಣೂರು ಪೊಲೀಸ್ ಠಾಣೆಯ ಪಿಎಸ್ಐ ಓಮನ ತಮ್ಮ ತಂಡದೊಂದಿಗೆ ಈ ದಾಳಿ ನಡೆಸಿದರು.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿಗಳು ದನಗಳನ್ನು ಕಳವು ಮಾಡಿ, ಅಕ್ರಮವಾಗಿ ವಧಿಸಿ ಮಾಂಸವನ್ನು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ, ಪೊಲೀಸರು ಅಕ್ಟೋಬರ್ 27 ರಂದು ಮಧ್ಯಾಹ್ನ 2:30 ರ ಸುಮಾರಿಗೆ ಸ್ಥಳಕ್ಕೆ ದಾಳಿ ನಡೆಸಿ, 91 ಕೆಜಿ ಗೋಮಾಂಸ, ಚಾಕು ಮತ್ತು ಇತರ ಸಂಬಂಧಿತ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಅಧಿನಿಯಮ 2020 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.