ಮಂಗಳೂರು, ಅ. 28 (DaijiworldNews/AA): ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯ ಮುಂದುವರಿದ ಭಾಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು, ಹಿಂದುತ್ವದ ಪ್ರಬಲ ಧ್ವನಿ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಮೇಲೆ ರಾಜಕೀಯ ಪ್ರೇರಿತ ಮೊಕದ್ದಮೆ ಹೂಡಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಆರೋಪಿಸಿದ್ದಾರೆ.

ಹಿಂದೂ ಸಮಾಜದ ಆದರಣೀಯರಾಗಿರುವ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಬಗ್ಗೆ ಸಚಿವ ಪ್ರಿಯಾಂಕ ಖರ್ಗೆ ಅವರು ಕೇವಲವಾಗಿ ಮಾತಾಡಿರುವುದು ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ರಾಷ್ಟ್ರೀಯ ವಿಚಾರಧಾರೆಗಾಗಿ ಕೆಲಸ ಮಾಡುವವರ ಮೇಲೆ ಎಷ್ಟರಮಟ್ಟಿಗೆ ದ್ವೇಷವಿದೆ ಎಂಬುವುದನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ. ಅವರ ಮೇಲಿನ ಮೊಕದ್ದಮೆಯು ಇದೇ ದ್ವೇಷದ ಮುಂದುವರಿದ ಭಾಗವಾಗಿದ್ದು, ರಾಷ್ಟ್ರೀಯ ವಿಚಾರಧಾರೆಗಾಗಿ ದುಡಿಯುವವರ ಧ್ವನಿಯನ್ನು ಅಡಗಿಸುವ ಪ್ರಯತ್ನ ಇದು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುವುದನ್ನೇ ಈಗ ಒಂದು ಛಾಳಿಯಾಗಿಸಿಕೊಂಡಿದೆ. ತಮ್ಮ ಸಿದ್ಧಾಂತ ಒಪ್ಪದವರನ್ನು ಆಡಳಿತದ ಕೋಲಿನಿಂದ ಹಣಿಯಲು ಯತ್ನಿಸುವುದು ಅಪಾಯಕಾರಿ. ಸಿದ್ಧಾಂತ ಪರ- ಭೇದಗಳನ್ನು ಎದುರಿಸುವ ಶಕ್ತಿ ವಾದ - ಪ್ರತಿವಾದದಲ್ಲಿರಬೇಕೇ ವಿನಹಃ ದ್ವೇಷದ ರಾಜಕಾರಣದಲ್ಲಿ ಅಲ್ಲ ಎಂದು ಅವರು ಹೇಳಿದ್ದಾರೆ.
ಮತ್ತೊಂದೆಡೆ ಸಚಿವ ಪ್ರಿಯಾಂಕ್ ಖರ್ಗೆ ಅವರು, ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ದರ್ಪ ಹಾಗೂ ಹಗುರ ಮಾತುಗಳಿಂದ ನಿಂದಿಸಿರುವುದು ಖಂಡನೀಯ. ಈ ರಾಜ್ಯದ ಮಂತ್ರಿಯಾಗಿ ಜನರಿಗೆ ಮಾದರಿಯಾಗಿ ನಡೆದುಕೊಳ್ಳಬೇಕಾಗಿರುವ ಓರ್ವ ಸಚಿವರ ಬಾಯಿಂದ ಈ ರೀತಿಯ ದುರಹಂಕಾರದ ಮಾತು ಬರುತ್ತದೆ ಅಂದರೆ ಅದು ಅವರ ವ್ಯಕ್ತಿತ್ವ-ನಡವಳಿಕೆಯನ್ನು ಎತ್ತಿ ತೋರಿಸುತ್ತದೆ. ಸಚಿವ ಪ್ರಿಯಾಂಕ ಖರ್ಗೆಯು ಈ ರೀತಿ ದುರಂಕಾರ ಹಾಗೂ ದರ್ಪದ ಮಾತುಗಳಿಂದ ನಿಂದಿಸುವುದನ್ನು ಮುಂದುವರಿಸಿದರೆ ಹಿಂದೂ ಸಮಾಜ ಸುಮ್ಮನಿರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಪ್ರಿಯಾಂಕ್ ಖರ್ಗೆಯವರು ಒಬ್ಬ ಹಿರಿಯರ ಬಗ್ಗೆ ಅಧಿಕಾರದ ಮದದಿಂದ 'ಅವರು ಅವರಪ್ಪ' ಎಂದು ಗೇಲಿ ಮಾಡುವುದು ಎಂದಿಗೂ ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಡಾ. ಪ್ರಭಾಕರ್ ಭಟ್ ಅವರು ಶಿಕ್ಷಣ ಮತ್ತು ಸಮಾಜ ಸೇವೆಗೆ ನೀಡಿದ ಕೊಡುಗೆ ಬಹಳ ದೊಡ್ಡದು. ಇಂತಹ ಹಿರಿಯರ ಬಗ್ಗೆ ಸಾರ್ವಜನಿಕವಾಗಿ ನಾಲಿಗೆ ಹರಿಬಿಟ್ಟು ಹಗುರವಾಗಿ ಮಾತನಾಡಿರುವುದು ಖೇದಕರ ಎಂದು ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.