ಉಡುಪಿ, ಅ. 27 (DaijiworldNews/AA): ಕಾರೊಂದು ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಪಡುಬಿದ್ರಿ ಎಎಸ್ಐ ಅವರ ಪುತ್ರಿ ಸ್ಪರ್ಶ (24) ಮೃತಪಟ್ಟ ಘಟನೆ ನಿಟ್ಟೂರು ಕೆಎಸ್ಆರ್ಟಿಸಿ ಡಿಪೋ ಬಳಿ ಅಕ್ಟೋಬರ್ 26ರಂದು ಸಂಭವಿಸಿದೆ.


ಅಕ್ಟೋಬರ್ 26ರಂದು ರಾತ್ರಿ ಸುಮಾರು 8:15ರ ಸುಮಾರಿಗೆ ಕರಾವಳಿ ಕಡೆಯಿಂದ ಸಂತಕಟ್ಟೆ ಕಡೆಗೆ ರಾಕೇಶ್ ಎಂಬುವವರು ಅಜಾಗರೂಕತೆಯಿಂದ ಕಾರು ಚಲಾಯಿಸಿಕೊಂಡು ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾರು, ಸ್ಕೂಟರ್ ಚಲಾಯಿಸುತ್ತಿದ್ದ ಶರ್ಮಿಳಾ (49) ಮತ್ತು ಅವರ ಜೊತೆ ಸವಾರಿ ಮಾಡುತ್ತಿದ್ದ ಪುತ್ರಿ ಸ್ಪರ್ಶಾ (24) ಅವರ ಸ್ಕೂಟರ್ಗೆ ಹಿಂದಿನಿಂದ ಬಲವಾಗಿ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.
ಡಿಕ್ಕಿಯ ಪರಿಣಾಮ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಶರ್ಮಿಳಾ ಅವರ ಕೈ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿದ್ದು, ಪುತ್ರಿ ಸ್ಪರ್ಶಾ ಅವರ ತಲೆಗೆ ತೀವ್ರ ಗಾಯಗಳಾಗಿದ್ದವು. ಗಾಯಾಳುಗಳನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ, ಪಡುಬಿದ್ರಿ ಎಎಸ್ಐ ಸುದೇಶ್ ಶೆಟ್ಟಿ ಅವರ ಪುತ್ರಿ ಸ್ಪರ್ಶಾ ಅವರು ಅಕ್ಟೋಬರ್ 27ರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ಕುರಿತು ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.