ಸುಳ್ಯ, ಅ. 27 (DaijiworldNews/TA): ಅರೆಭಾಷೆ ಗ್ರಾಮೋತ್ಸವ ಮೂಲಕ ಅರೆಭಾಷಿಕರ ಸಂಸ್ಕ್ರತಿ, ಸಂಪ್ರದಾಯ,ಆಚರಣೆಗಳ ಉಳಿವಿಗೆ ಪ್ರಯತ್ನಿಸಲಾಗುವುದೆಂದು ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ಆಶ್ರಯದಲ್ಲಿ ಆಲೆಟ್ಟಿಯ ಬಡ್ಡಡ್ಕ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಅ. 26 ರಂದು ನಡೆದ ಅರೆಭಾಷೆ ಗ್ರಾಮೋತ್ಸವ 2025ರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪುರುಷೋತ್ತಮ ಕೋಲ್ಟಾರು ರವರು ದೀಪ ಪ್ರಜ್ವಲಿಸಿ,ಕಳಸಕ್ಕೆ ಭತ್ತ ತುಂಬುವ ಮೂಲಕ ಸಂಪ್ರದಾಯದ ಪ್ರಕಾರ ಗ್ರಾಮೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಲೆಟ್ಟಿ ಗೌಡ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಕೋಲ್ಟಾರು, ಗ್ರಾಮ ಪಂಚಾಯತ್ ಸದಸ್ಯೆ ಭಾಗೀರಥಿ ಪತ್ತುಕುಂಜ, ಕಲ್ಲಪಳ್ಳಿ ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ಆಲುಗುಂಜ, ಆಲೆಟ್ಟಿ ಗೌಡ ಘಟಕದ ಅಧ್ಯಕ್ಷ ಸತೀಶ್ ಕೊಯಿಂಗಾಜೆ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಲೆಟ್ಟಿ ಪಂಚಾಯತ್ ಮಾಜಿ ಸದಸ್ಯ ಹೇಮನಾಥ ಬಡ್ಡಡ್ಕ ಪ್ರಾಚೀನ ವಸ್ತುಗಳ ಮಳಿಗೆಯನ್ನು ಉದ್ಘಾಟಿಸಿದರು.