ಮಂಗಳೂರು, ಅ. 27 (DaijiworldNews/TA): ಕಮಿಷನರೇಟ್ ವ್ಯಾಪ್ತಿಯಲ್ಲಿ 2015ರಿಂದ 2025ರ ತನಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ಕಾಯ್ದೆಯಡಿ 151 ಪ್ರಕರಣಗಳು ದಾಖಲಾಗಿದ್ದರೂ ಕೇವಲ 7 ಮಂದಿಗೆ ನ್ಯಾಯಾಲಯದಲ್ಲಿ ಸಜೆ ಆಗಿದೆ, ಉಳಿದ 144 ಪ್ರಕರಣಗಳು ಖುಲಾಸೆಯಾಗಿರುವ ವಿಚಾರ ಇದೀಗ ಬಹಿರಂಗವಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರವಿವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾಸಿಕ ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ ಅವರು ತಮಗೆ ಮಾಹಿತಿ ಹಕ್ಕು ಅಧಿನಿಯಮದಡಿ ದೊರೆತ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ಕಾಯ್ದೆಯಡಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಕರಣ ಗಳು ದಾಖಲಾಗಿದ್ದರೂ ಅವರಿಗೆ ಶಿಕ್ಷೆ ಆಗದಿರುವುದು ದುರದೃಷ್ಟಕರ. ಈ ರೀತಿ ಶಿಕ್ಷೆಯಿಂದ ಪಾರಾಗುವುದರಿಂದ ಪರಿಶಿಷ್ಟರ ಮೇಲೆ ದೌರ್ಜನ್ಯ ನಡೆಸುವವರಿಗೆ ಈ ಕಾನೂನಿಂದ ಏನು ಆಗುವುದಿಲ್ಲ ಎಂದು ಮತ್ತಷ್ಟು ದೌರ್ಜನ್ಯ ನಡೆಸಲು ಅವಕಾಶ ನೀಡಿದಂತಾಗುತ್ತದೆ.
ಈ ಕಾರಣದಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ದೌರ್ಜನ್ಯ ನಡೆಸುವ ಆರೋಪಿಗಳಿಗೆ ಸರಿಯಾದ ಶಿಕ್ಷೆ ಆಗುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಗಮನ ಹರಿಸಬೇಕು. ದೌರ್ಜನ್ಯ ತಡೆ ಕಾಯ್ದೆಯ ಬಗ್ಗೆ ದಲಿತ ಮುಖಂಡರಿಗೆ ಮಾಹಿತಿ ಕಾರ್ಯಾಗಾರ ನೀಡುವ ನಿಟ್ಟಿನಲ್ಲಿ ತಾವು ಗಮನ ಹರಿಸಬೇಕು ಎಂದು ಆಗ್ರಹಿಸಿದರು. ದೌರ್ಜನ್ಯಕ್ಕೊಳಗಾದವರಿಗೆ ಧೈರ್ಯ ತುಂಬುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡಬೇಕು ಎಂದು ದಲಿತ ಮುಖಂಡ ಎಸ್.ಪಿ. ಆನಂದ ಒತ್ತಾಯಿಸಿದರು. ದೌರ್ಜನ್ಯಕ್ಕೊಳಗಾದವರ ಪರ ಸರಿಯಾದ ಸಾಕ್ಷ್ಯಾಧಾರಗಳು ಇಲ್ಲದ ಕಾರಣದಿಂದಾಗಿ ಪ್ರಕರಣಗಳು ನ್ಯಾಯಾಲಯದಲ್ಲಿ ಬಿದ್ದು ಹೋಗುತ್ತದೆ.
ದೌರ್ಜನ್ಯಕ್ಕೊಳಗಾದವರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ದಲಿತ ಸಂಘಟನೆಗಳು ಗಮನಹರಿಸಬೇಕು ಎಂದು ಡಿಸಿಪಿ ರವಿಶಂಕರ್ ಸಲಹೆ ನೀಡಿದರು. ಪರಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕಾನೂನು ಮಾಹಿತಿ ಮತ್ತು ಸರಕಾರದ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪ.ಪಂಗಡದವರಿಗೆ ಲಭ್ಯವಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಗಾರವನ್ನು ಆಯೋಜಿಸಲಾಗುವುದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ಉಪ ಆಯುಕ್ತ ಮಿಥುನ್ ಎನ್ ಸಭೆಗೆ ತಿಳಿಸಿದರು. ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ , ಸಂಚಾರ ಉಪವಿಭಾಗದ ಡಿಸಿಪಿ ನಜ್ಮಾ ಫಾರೂಕಿ ಉಪಸ್ಥಿತರಿದ್ದರು.