Karavali
ದೀಪಾವಳಿ ಸಂಭ್ರಮ - ಪಟಾಕಿ ಹಚ್ಚುವ ಮುನ್ನ ಎಚ್ಚರ..!
- Sat, Oct 18 2025 06:23:41 PM
-
ಮಂಗಳೂರು, ಅ. 18 (DaijiworldNews/TA): ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ... ಬೆಳಕಿನ ಹಬ್ಬ ಬಂತೆಂದರೆ ಸಾಕು ಎಲ್ಲೆಡೆ ಕೇಳಿ ಬರುವ ಹಾಡು ಇದು. ಅರ್ಥ ಗರ್ಭಿತ ಆಚರಣೆಗೆ ಕೈಗನ್ನಡಿ ಈ ಹಾಡು ಎಂದರೂ ತಪ್ಪಾಗಲಾರದು. ಹೌದು ದೀಪಾವಳಿ ಎಂದರೆ ಅದು ಬೆಳಕಿನ ಹಬ್ಬ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಹಾದಿಯ ಹೆಜ್ಜೆಗುರುತು ಈ ಹಬ್ಬ. ಆದರೆ ಆಧುನೀಕರಣಕ್ಕೆ ಮಾರು ಹೋಗಿರೋ ಜನತೆ ಈಗ ದೀಪಾವಳಿಯನ್ನು ಪಟಾಕಿಗಳ ಹಬ್ಬವಾಗಿ ಶಬ್ಧ ಗದ್ದಲಗಳ ಮೋಜು ಮಸ್ತಿಯಾಗಿ ಆಚರಣಾ ಕ್ರಮವಾಗಿಸಿದ್ದಾರೆ. ಆದರೆ ಆ ಬೃಹತ್ ಶಬ್ಧಕ್ಕೆ ಒತ್ತು ನೀಡೋ ಮುನ್ನ ಒಂದು ನಿಮಿಷ ಎಚ್ಚರ ವಹಿಸೋದು ಉತ್ತಮ.
ಹೌದು ಕಲರ್ಫುಲ್ ಜಗತ್ತಿನಲ್ಲಿ ಬೆಳಕಿನೊಂದಿಗೆ ರಂಗಿನ ಪೈಪೋಟಿಯ ಸಂತಸ, ಕ್ಷಣಿಕ ಆನಂದಕ್ಕೆ ವರ್ಣರಂಜಿತವಾಗುವ ಆಗಸ. ದೀಪದ ಬೆಳಕಿನ ಜೊತೆ ಸಪ್ಪಳದ ಸಡಗರವೂ ಬೇಕೇ ಬೇಕು ಅನ್ನೋ ಹಾಗೆ ಆಚರಣೆಯಲ್ಲಿ ಒಂದಷ್ಟು ಆಡಂಬರ ತರುವ ನಿಟ್ಟಿನಲ್ಲಿ ಆರೋಗ್ಯವನ್ನು ಅಲ್ಲಗಳೆದು ಮೂರ್ಖನಾಗುವ ಬದಲು ಬೇಕು ಬೇಡಗಳ ಅರಿತು ಹಬ್ಬದ ಸಂಭ್ರಮ ಹೆಚ್ಚಿಸಿದರೆ ಹಬ್ಬ ಖುಷಿಗೆ ಸಾಕ್ಷ್ಯವಾಗುವುದರಲ್ಲಿ ಸಂದೇಹವಿಲ್ಲ.
ಖುಷಿಗೊಂದಷ್ಟು ಶಬ್ದ ಬೇಕು ಆದರೆ ಆ ಸಂತಸಕ್ಕಾಗಿ ಮನೆಮಕ್ಕಳನ್ನು ಮರೆಯದಿರಿ. ನಿಜ ಶಿಶುಗಳು, ಮಕ್ಕಳಿಗೆ, ಹಠಾತ್ ಶಬ್ದದ ಸ್ಫೋಟಗಳು ಭಯ, ನಿದ್ರೆಗೆ ಭಂಗ ಮತ್ತು ಆತಂಕವನ್ನು ಹೆಚ್ಚಿಸುತ್ತವೆ. ಗರ್ಭಿಣಿಯರು ಹೆಚ್ಚುವರಿ ಆರೋಗ್ಯ ಅಪಾಯಗಳನ್ನು ಎದುರಿಸುತ್ತಾರೆ, ಜೋರಾಗಿ, ಅನಿರೀಕ್ಷಿತ ಶಬ್ದಗಳು ತಾಯಿ ಮತ್ತು ಮಗುವಿನ ಮೇಲೆ ನೇರವಾಗಿ ಪರಿಣಾಮ ಬೀರುವ ಒತ್ತಡದ ಮಟ್ಟವನ್ನು ಹೆಚ್ಚಿಸುತ್ತವೆ. ಹಿರಿಯರು ಸಹ ಇದರ ಹೊರೆಯನ್ನು ಹೊರುತ್ತಾರೆ - ಬೆಚ್ಚಿಬೀಳುತ್ತಾರೆ, ನಿದ್ರಾಹೀನರಾಗುತ್ತಾರೆ ಮತ್ತು ಹೆಚ್ಚಾಗಿ ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತದಂತಹ ಅಪಾಯಕ್ಕೆ ತುತ್ತಾಗುತ್ತಾರೆ. ವೈದ್ಯಕೀಯ ಅಧ್ಯಯನಗಳು ಹಠಾತ್, ಹೆಚ್ಚಿನ ಡೆಸಿಬಲ್ ಶಬ್ದವು ಆತಂಕ, ನಿದ್ರೆಯ ತೊಂದರೆ ಮತ್ತು ಹೃದಯದ ರಕ್ತನಾಳದ ಒತ್ತಡವನ್ನು ಉಂಟುಮಾಡಬಹುದು ಎಂದು ಹೇಳುತ್ತವೆ. ನಿಜ ಇವೆಲ್ಲಾ ತಿಳಿದಿದ್ದರೂ ಆಚರಣೆಯ ಹೆಸರಿನಲ್ಲಿ ಅವರ ಆರೋಗ್ಯಕ್ಕೇ ನಾವೇ ವೈರಿಗಳು ಆಗೋದ್ಯಾಕೆ? ಒಮ್ಮೆ ಯೋಚಿಸಿ.
ವಿಷಯವು ಸಂಪ್ರದಾಯ ಅಥವಾ ಆಚರಣೆಯ ಬಗ್ಗೆ ಅಲ್ಲ, ಬದಲಾಗಿ ಸಮಯ ಮತ್ತು ಗೌರವದ ಬಗ್ಗೆ. ಕೆಲವರಿಗೆ ಸಂತೋಷದ ಕ್ಷಣದಂತೆ ಭಾಸವಾಗುವುದು ಇನ್ನು ಕೆಲವರಿಗೆ ಗಂಟೆಗಟ್ಟಲೆ ದುಃಖದ ಕ್ಷಣವಾಗಿ ಪರಿಣಮಿಸುವುದು. ಪ್ರಗತಿಪರ ಆಡಳಿತದತ್ತ ಸಾಗುತ್ತಿದ್ದೇವೆ ಎಂದು ಹೇಳಿಕೊಳ್ಳುವ ನಗರಗಳು ಅಂತಹ ಅಸಮತೋಲನವನ್ನು ಕಡೆಗಣಿಸಲು ಸಾಧ್ಯವಿಲ್ಲ. ತಡರಾತ್ರಿ ಪಟಾಕಿ ಬಳಕೆಯನ್ನು ನಿರ್ಬಂಧಿಸುವ ನಿಯಮಗಳು ಸಂಸ್ಕೃತಿಯ ಮೇಲಿನ ದಾಳಿಯಲ್ಲ, ಬದಲಾಗಿ ಸಾರ್ವಜನಿಕ ಆರೋಗ್ಯದ ಬಗೆಗಿನ ಕಾಳಜಿಯ ಅವಶ್ಯವಾಗಿದೆ.
ಭಾರತದ ಸುಪ್ರೀಂ ಕೋರ್ಟ್ , 2018 ರ ತನ್ನ ತೀರ್ಪಿನಲ್ಲಿ ಪಟಾಕಿಗಳ ಬಳಕೆಯನ್ನು ನಿರ್ದಿಷ್ಟ ಸಮಯಕ್ಕೆ ಸೀಮಿತಗೊಳಿಸಿದೆ. ಹಬ್ಬಗಳಿಗೆ ರಾತ್ರಿ 8:00–10:00 ಮತ್ತು ಹೊಸ ವರ್ಷ ಮತ್ತು ಕ್ರಿಸ್ಮಸ್ ಆಚರಣೆಗಳಿಗೆ ರಾತ್ರಿ 11:55–12:30 . ಹೆಚ್ಚುವರಿಯಾಗಿ, "ಹಸಿರು ಪಟಾಕಿಗಳನ್ನು" ಮಾತ್ರ ತಯಾರಿಸಿ ಮಾರಾಟ ಮಾಡಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ . ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ರಾಜ್ಯ ಸರ್ಕಾರಗಳು ಈ ನಿರ್ಬಂಧಗಳನ್ನು ಜಾರಿಗೊಳಿಸಬೇಕು ಎಂದು ಪದೇ ಪದೇ ಒತ್ತಿ ಹೇಳಿದೆ.
ಅದೆಷ್ಟೇ ನೀತಿ ನಿಯಮಗಳು ಜಾರಿಯಲ್ಲಿದ್ದರೂ ಸಂಭ್ರಮ ಸಡಗರದಲ್ಲಿ ಕಳೆದು ಹೋಗಿರೋ ವ್ಯಕ್ತಿ ಒಂದು ಕ್ಷಣ ಎಲ್ಲವನ್ನೂ ಮರೆತು ಆ ಕ್ಷಣದ ಖುಷಿಗಾಗಿ ಮೈಮರೆಯುತ್ತಾನೆ. ಈ ಮೂಲಕ ಸಮಸ್ಯೆಗಳನ್ನು ಕೈಬೀಸಿ ಕರೆಯುತ್ತಾನೆ. ನಿಜ ಸಾಂಸ್ಕೃತಿಕ ಸಂಪ್ರದಾಯಗಳನ್ನು ಗೌರವಿಸುತ್ತಾ ನಾಗರಿಕರನ್ನು ರಕ್ಷಿಸಲು, ಬಲವಾದ ನೀತಿ ಕ್ರಮವು ತುರ್ತಾಗಿ ಅಗತ್ಯವಿದೆ.
ಕ್ರಮಗಳು ಯಾವುವು?:
ದೇಶಾದ್ಯಂತ ಏಕರೂಪದ ಜಾರಿ: ಪಟಾಕಿಗಳ ಬಳಕೆಯನ್ನು ಎಲ್ಲಾ ರಾಜ್ಯಗಳಲ್ಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಸಮಯಕ್ಕೆ ಮಾತ್ರ ಸೀಮಿತಗೊಳಿಸಬೇಕು, ವಿನಾಯಿತಿಗಳಿಲ್ಲದೆ.
ಕಟ್ಟುನಿಟ್ಟಾದ ಡೆಸಿಬಲ್ ಮಾನಿಟರಿಂಗ್: ಅನುಮತಿಸಲಾದ ಶಬ್ದ ಮಟ್ಟಕ್ಕಿಂತ ಹೆಚ್ಚಿನ ಪಟಾಕಿಗಳನ್ನು ಉತ್ಪಾದಿಸುವ ತಯಾರಕರಿಗೆ ಕಡ್ಡಾಯ ಪರೀಕ್ಷೆ ಮತ್ತು ದಂಡ.
ಸಾರ್ವಜನಿಕ ಜಾಗೃತಿ ಅಭಿಯಾನಗಳು: ರಾಷ್ಟ್ರವ್ಯಾಪಿ ಅಭಿಯಾನಗಳು ನಾಗರಿಕರಿಗೆ ತಡರಾತ್ರಿಯ ಪಟಾಕಿಗಳ ಶಬ್ಧ ಆರೋಗ್ಯದ ಮೇಲೆ, ವಿಶೇಷವಾಗಿ ಮನೆಮಕ್ಕಳು, ಹಿರಿಯರು, ಪ್ರಾಣಿ ಪಕ್ಷಿಗಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವಂತಿರಬೇಕು.
ಸ್ಥಳೀಯ ಹೊಣೆಗಾರಿಕೆ: ಪುರಸಭೆ ಸಂಸ್ಥೆಗಳು ಮತ್ತು ಪೊಲೀಸರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಜವಾಬ್ದಾರರಾಗಿರಬೇಕು.ಹಬ್ಬಗಳು, ಆಚರಣೆಗಳು ನಿರಂತರವಾದವುಗಳು. ಹಬ್ಬದ ಸಡಗರಕ್ಕೆ ಶಬ್ದ ಬೆಳಕು ಎಲ್ಲವೂ ಬೇಕು. ಆದರೆ ಈ ಸಪ್ಪಳ ಗದ್ದಳದ ಗುಂಗಿನಲ್ಲಿ ನಮ್ಮವರನ್ನೇ ನಾವು ಕಳೆದುಕೊಳ್ಳುವಂತಾಗಬಾರದು. ಆಚರಿಸುವ ಹಕ್ಕು,ಸುರಕ್ಷತೆ ಮತ್ತು ಘನತೆಯ ಹಕ್ಕನ್ನು ಅತಿಕ್ರಮಿಸಲು ಸಾಧ್ಯವಿಲ್ಲ. ಬಲವಾದ ನೀತಿ ಕ್ರಮವು ಸಂಪ್ರದಾಯವನ್ನು ನಿಗ್ರಹಿಸುವ ಬಗ್ಗೆ ಅಲ್ಲ, ಸಂತೋಷ ಮತ್ತು ನ್ಯಾಯ ಎರಡನ್ನೂ ಗೌರವಿಸುವ ಸಮಾಜಕ್ಕಾಗಿ ಅದನ್ನು ಜವಾಬ್ದಾರಿಯುತವಾಗಿ ರೂಪಿಸುವುದರ ಮಾರ್ಗದರ್ಶನವಾಗಿರುತ್ತದೆ. ಪ್ರಕೃತಿ ಮಾನವನ ಸರ್ವತೋಮುಖ ಬೆಳವಣಿಗೆಗೆ ತನ್ನೆಲ್ಲಾ ಸಂಪತ್ತನ್ನು ಧಾರಾಳವಾಗಿ ಧಾರೆ ಎರೆದಿದೆ. ಅದು ಕೇವಲ ನಮಗೆ ಮಾತ್ರ ಸೀಮಿತವಲ್ಲ. ಮುಂದಿನ ಪೀಳಿಗೆಗೂ ಅವಶ್ಯಕ. ಭುವನಕ್ಕೆ ಅಲಂಕಾರ ಬೇಕಿಲ್ಲ ಕಾರಣ ಹಸುರು ತೋರಣವೇ ಹಾಸಿಹುದು. ಗಗನಕ್ಕೆ ವರ್ಣಲಂಕಾರಬೇಕಿಲ್ಲ. ಕಾರಣ ಹಗಲು -ಇರುಳು, ಹವೆಗನುಗುಣವಾಗಿ ಬಣ್ಣ ಬದಲಿಸೋ ಸಾಮರ್ಥ್ಯ ಅದಕ್ಕಿಹುದು. ಅಬ್ಬರದ ಹೆಸರಲ್ಲಿ ಅಭಿವೃದ್ದಿ ಮಾಡಿದರೂ ಪರವಾಗಿಲ್ಲ ಅವನತಿ ಮಾಡುವ ಅಧಿಕಾರ ಮನುಜನಿಗಿಲ್ಲ. ಪ್ರತಿ ಜೀವಿಯೂ ಭೂ ಮಾತೆಯ ಅತಿಥಿಗಳು ಇದ್ದು ಹೋಗೋ ಬದುಕಲ್ಲಿ ಒಂದಷ್ಟು ಉತ್ತಮ ನೆನಪು ಭುವಿಯಲ್ಲಿ ಲೀನವಾಗಲಿ... ಮಾಲಿನ್ಯಕ್ಕೆ ಮಾನ್ಯತೆ ಬೇಡ.
-ತಾರಾ ನವೀನ್ ಶೆಟ್ಟಿ ವರ್ಕಾಡಿ