ಉಡುಪಿ, ಅ. 18 (DaijiworldNews/TA): ದೈಹಿಕ ಸಾಮರ್ಥ್ಯವನ್ನು ಉತ್ತೇಜಿಸುವ ಉದ್ದೇಶದಿಂದ ರನ್ನರ್ಸ್ ಕ್ಲಬ್ ವತಿಯಿಂದ ಎರಡನೇ ಆವೃತ್ತಿಯ ಲೊಂಬಾರ್ಡ್ ಆಸ್ಪತ್ರೆ ಉಡುಪಿ ಮ್ಯಾರಥಾನ್ 2025 ನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಸುಶೀಲ್ ಜತ್ತನ್ನ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು, ರನ್ನರ್ಸ್ ಕ್ಲಬ್ ವತಿಯಿಂದ ಆರೋಗ್ಯಕರ ಹೃದಯ, ಆರೋಗ್ಯಕರ ಕುಟುಂಬಗಳು ಎಂಬ ಧೈಯವಾಕ್ಯದೊಂದಿಗೆ ಸಮುದಾಯದವರು ಓಟದಲ್ಲಿ ಭಾಗವಹಿಸುವ ಮೂಲಕ ದಿನಾಂಕ ಡಿಸೆಂಬರ್ 7 ರಂದು ಉಡುಪಿ ಜಿಲ್ಲಾ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ಮ್ಯಾರಥಾನ್ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಿಂದ ಆರಂಭಿಸಿ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಜಿಲ್ಲಾ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಮುಕ್ತಾಯ ಗೊಳ್ಳಲಿದೆ. ಈ ವರ್ಷದ ಮ್ಯಾರಥಾನ್ ನ ಮುಖ್ಯ ಪ್ರಾಯೋಜಕರಾಗಿ ಲೊಂಬಾರ್ಡ್ ಆಸ್ಪತ್ರೆ, ಉಡುಪಿ ಹಾಗೂ ಸಹ ಪ್ರಯೋಜಕರಾಗಿ ಗ್ರಾಸ್ ಲ್ಯಾಂಡ್ ಡೆವಲಪರ್ ಮತ್ತು ಕೊಚ್ಚಿನ್ ಶಿಪ್ ಯಾರ್ಡ್ ಇವರ ಆಶ್ರಯದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.
ಉಡುಪಿ ರನ್ನರ್ ಕ್ಲಬ್ ಜೊತೆ ಕಾರ್ಯದರ್ಶಿ ದಿವ್ಯೇಶ್ ಶೆಟ್ಟಿ ಮ್ಯಾರಥಾನ್ ನ ವಿವರಣೆ ನೀಡಿ, ವಿವಿಧ ವಯೋಮಾನದ ಪುರುಷ, ಹಾಗೂ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗಾಗಿ 21 ಕಿ.ಮಿ,, 10 ಕಿ.ಮಿ,,5 ಕಿ.ಮಿ,, 3 ಕಿ.ಮಿ,, ಸ್ಯಾರಿ ರನ್ ಹಾಗೂ ಫನ್ ರನ್ ಆಯೋಜಿಸಲಾಗಿದೆ. ಮ್ಯಾರಥಾನ್ ಎಲ್ಲಾ ವಿಭಾಗಗಳಲ್ಲಿ ಮೊದಲ ಸ್ಥಾನಗಳಿಸಿದವರಿಗೆ ನಗದು ಬಹುಮಾನವನ್ನು ನೀಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ದೇಶ ವಿದೇಶದಿಂದ ಸುಮಾರು 3000ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇರುತ್ತವೆ ಎಂದರು. ಸುದ್ದಿಗೋಷ್ಠಿಯಲ್ಲಿ ರನ್ನರ್ ಕ್ಲಬ್ ಕಾರ್ಯದರ್ಶಿ ದಿವಾಕರ್ IMA ಅಧ್ಯಕ್ಷ ಅಶೋಕ್ ಕುಮಾರ್, ರೆಡಿಯೋಲಾಜಿಸ್ಟ್ ಡಾ. ತಿಲಕ್ ಚಂದ್ರಪಾಲ್ ಉಪಸ್ಥಿತರಿದ್ದರು.