ಉಡುಪಿ, ಅ. 18 (DaijiworldNews/AA): ಕಲ್ಸಂಕ-ಅಂಬಾಗಿಲು ರಸ್ತೆಯಲ್ಲಿ ನಿರ್ಮಾಣವಾಗಿರುವ ದೊಡ್ಡ ಹೊಂಡಗಳಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ತೀವ್ರ ಅಪಾಯ ಎದುರಿಸುವಂತಾಗಿದೆ. ಜೊತೆಗೆ ಈ ಮಾರ್ಗದಲ್ಲಿ ವಾಹನ ಚಲಾಯಿಸುವುದು ಬಹುತೇಕ ಅಸಾಧ್ಯವಾಗಿದೆ.



ರಸ್ತೆಯಲ್ಲಿನ ದೊಡ್ಡ ಗುಂಡಿಯ ಸುತ್ತಲೂ ಯಾವುದೇ ಬ್ಯಾರಿಕೇಡ್ ಅಳವಡಿಸಿಲ್ಲ. ಇದರಿಂದಾಗಿ ವಾಹನಗಳು ನೇರವಾಗಿ ಅದರ ಮೇಲೆ ಹಾದುಹೋಗುತ್ತಿದ್ದು, ಸವಾರರಿಗೆ ತೀವ್ರ ಅಪಾಯವನ್ನು ತಂದೊಡ್ಡಿದೆ.
ಕಳೆದ ಹಲವಾರು ತಿಂಗಳುಗಳಿಂದ ಈ ಸಮಸ್ಯೆಯನ್ನು ವಾಹನ ಸವಾರರು ಎದುರಿಸುತ್ತಿದ್ದರೂ, ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ರಸ್ತೆಯ ಅಸಮ ಮೇಲ್ಮೈ ಮತ್ತು ನೀರಿನಿಂದ ತುಂಬಿದ ಹೊಂಡಗಳು ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚು ತೊಂದರೆಯನ್ನುಂಟುಮಾಡುತ್ತಿವೆ. ಹೊಂಡಗಳಿಂದಾಗಿ ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬೀಳುವ ಸಾಧ್ಯತೆ ಹೆಚ್ಚಿದೆ. ರಾತ್ರಿ ಸಮಯದಲ್ಲಿ, ಹೊಂಡಗಳು ಕಾಣಿಸದೆ ಪರಿಸ್ಥಿತಿ ಇನ್ನಷ್ಟು ಅಪಾಯವನ್ನು ತಂದೊಡ್ಡಿದೆ. ಇದರಿಂದ ಈ ರಸ್ತೆ ಅಪಘಾತಗಳ ತಾಣವಾಗಿ ಮಾರ್ಪಟ್ಟಿದೆ.
ಪ್ರತಿದಿನ ಬೆಳಿಗ್ಗೆ ನೂರಾರು ಶಾಲಾ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಇಂತಹ ಸಮಯದಲ್ಲಿ ಬ್ಯಾರಿಕೇಡ್ ಇಲ್ಲದಿರುವುದು ಗಂಭೀರ ಅಪಾಯಗಳನ್ನು ಉಂಟುಮಾಡಿದೆ. ರಸ್ತೆಯಲ್ಲಿರುವ ದೊಡ್ಡ ಹೊಂಡವನ್ನು ತಪ್ಪಿಸಲು ಅನೇಕ ಸವಾರರು ಧಿಡೀರ್ ತಿರುವುಗಳನ್ನು ತೆಗೆದುಕೊಳ್ಳಲು ಅಥವಾ ರಸ್ತೆಯ ತುದಿಗೆ ತೀರಾ ಹತ್ತಿರವಾಗಿ ಓಡಿಸುವಂತಾಗಿದೆ. ಇದರಿಂದಾಗಿ ಡಿಕ್ಕಿ ಹೊಡೆಯುವ ಸಾಧ್ಯತೆ ಹೆಚ್ಚಿದೆ.
ನಿರಂತರ ವಾಹನ ಸಂಚಾರ ಮತ್ತು ಕಳಪೆ ನಿರ್ವಹಣೆಯಿಂದಾಗಿ ರಸ್ತೆ ಮತ್ತಷ್ಟು ಹದಗೆಟ್ಟಿದೆ. ಹಾನಿಗೊಳಗಾದ ಡಾಂಬರು, ಸವೆದುಹೋದ ಮೇಲ್ಮೈ ಮತ್ತು ನಿಂತ ನೀರು ವಾಹನ ಸಂಚಾರಕ್ಕೆ ಅತ್ಯಂತ ಕಷ್ಟಕರವಾಗಿದೆ. ಭಾರೀ ಮಳೆ ಅಥವಾ ಕಡಿಮೆ ಬೆಳಕಿನ ಪರಿಸ್ಥಿತಿಗಳಲ್ಲಿ, ಅನುಭವಿ ಸವಾರರು ಸಹ ಈ ಗುಂಡಿಗಳನ್ನು ಸಮಯಕ್ಕೆ ಸರಿಯಾಗಿ ಗಮನಿಸಲು ವಿಫಲರಾಗುತ್ತಾರೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ.
ಪುರಸಭೆ ಅಧಿಕಾರಿಗಳು ತಕ್ಷಣದ ಕ್ರಮ ಕೈಗೊಳ್ಳಬೇಕು. ಈ ಮಾರ್ಗವನ್ನು ಅವಲಂಬಿಸಿರುವ ವಿದ್ಯಾರ್ಥಿಗಳು, ಕೆಲಸಗಾರರು ಮತ್ತು ದೈನಂದಿನ ಪ್ರಯಾಣಿಕರನ್ನು ರಕ್ಷಿಸಲು ಸಮಯೋಚಿತ ದುರಸ್ತಿ ಅತ್ಯಗತ್ಯ ಎಂದು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ. ಪುನರಾವರ್ತಿತ ದೂರುಗಳ ಹೊರತಾಗಿಯೂ, ರಸ್ತೆ ನಿರ್ಲಕ್ಷ್ಯದ ಸ್ಥಿತಿಯಲ್ಲಿದೆ. ಇದರಿಂದಾಗಿ ಸಾರ್ವಜನಿಕರು ತೀವ್ರ ಅಪಾಯ ಎದುರಿಸುವಂತಾಗಿದೆ.