ಮಂಗಳೂರು, , ಅ. 16 (DaijiworldNews/AK):ಕರಾವಳಿಯ ಯಕ್ಷರಂಗ ಕ್ಷೇತ್ರದಲ್ಲಿ ತಮ್ಮ ಸುಮಧುರ ಗಾಯನದಿಂದ ರಸರಾಗ ಚಕ್ರವರ್ತಿ ಎಂದೇ ಪ್ರಸಿದ್ಧಿ ಪಡೆದಿರುವ ಹಿರಿಯ ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ ನಿಧನರಾಗಿದ್ದಾರೆ.

ತೆಂಕುತಿಟ್ಟು ಯಕ್ಷಗಾನ ಪರಂಪರೆಯ ಹಿರಿಯ ಭಾಗವತರಾದ ಅವರು, ತಮ್ಮ ಕಂಚಿನ ಕಂಠ ಹಾಗೂ ವಿಶಿಷ್ಟ ರಾಗ ಸಂಯೋಜನೆಯ ಮೂಲಕ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರ ಅಗಲಿಕೆಯಿಂದ ಯಕ್ಷಗಾನ ಲೋಕಕ್ಕೆ ಭಾರಿ ನಷ್ಟವಾಗಿದೆ. ಪೌರಾಣಿಕ ಮತ್ತು ತುಳು ಪ್ರಸಂಗಗಳೆರಡರಲ್ಲೂ ತಮ್ಮ ಛಾಪು ಮೂಡಿಸಿರುವ ಇವರು, ಯಕ್ಷಗಾನ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು.
ದಿನೇಶ್ ಅಮ್ಮಣ್ಣಾಯ ಯಕ್ಷಗಾನ ರಂಗದಲ್ಲಿ ತಮ್ಮ ಅಮೋಘ ಭಾಗವತಿಕೆಯ ಮೂಲಕ ಸಂಚಲನ ಮೂಡಿಸಿದ್ದಾರೆ. ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರಾದ ದಾಮೋದರ ಮಂಡೆಚ್ಚರ ಗರಡಿಯಲ್ಲಿ ಪಳಗಿದ ದಿನೇಶ್ ಅಮ್ಮಣ್ಣಾಯರು, ತಮ್ಮ ವೃತ್ತಿಜೀವನವನ್ನು ಪುತ್ತೂರು ಮೇಳದಲ್ಲಿ ಚಂಡೆ ಮತ್ತು ಮದ್ದಳೆ ವಾದಕರಾಗಿ ಆರಂಭಿಸಿದ್ದರು.
ಹಿಮ್ಮೇಳ ವಾದನದ ಅನುಭವದೊಂದಿಗೆ ಭಾಗವತಿಕೆಯತ್ತ ಮುಖ ಮಾಡಿದ ಅವರು, ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡು ಯಶಸ್ವಿಯಾಗಿ ಅಗ್ರಮಾನ್ಯ ಸ್ಥಾನಕ್ಕೇರಿದ್ದರು. ಅಮ್ಮಣ್ಣಾಯರು ಕೇವಲ ಪೌರಾಣಿಕ ಪ್ರಸಂಗಗಳಿಗಷ್ಟೇ ಅಲ್ಲದೆ, ಅನೇಕ ತುಳು ಪ್ರಸಂಗಗಳಿಗೂ ಧ್ವನಿಯಾಗಿ ಅಪಾರ ಜನಮನ್ನಣೆ ಗಳಿಸಿದವರು. ಅದರಲ್ಲೂ 'ಕಾಡಮಲ್ಲಿಗೆ', 'ಕಚ್ಚೂರ ಮಾಲ್ದಿ', 'ಪಟ್ಟದ ಪದ್ಮಲೆ' ಹಾಗೂ 'ಮಾನಿಷಾದ' ದಂತಹ ಪ್ರಸಂಗಗಳನ್ನು ತಮ್ಮ ಗಾಯನದಿಂದ ಜನಪ್ರಿಯಗೊಳಿಸಿದ ಕೀರ್ತಿ ಅವರದ್ದಾಗಿತ್ತು. ಅಲ್ಲದೆ, 'ಸತ್ಯಹರಿಶ್ಚಂದ್ರ' ಪ್ರಸಂಗದ ಹಾಡುಗಳಿಗೆ ಅಭಿಮಾನಿಗಳು ಸಹಸ್ರಾರು.
ಅವರ ಅನುಪಮ ಕಲಾ ಸೇವೆಗೆ ಉಡುಪಿ ತುಳುಕೂಟವು ಪ್ರತಿಷ್ಠಿತ 'ಸಾಮಗ ಪ್ರಶಸ್ತಿ' ನೀಡಿ ಗೌರವಿಸಿತ್ತು. ಹಲವಾರು ಪ್ರಮುಖ ಮೇಳಗಳಲ್ಲಿ ತಿರುಗಾಟ ನಡೆಸಿ ಅನುಭವ ಹೊಂದಿದ್ದ ಅವರು, ಇತ್ತೀಚಿನ ದಿನಗಳಲ್ಲಿ ಹವ್ಯಾಸಿ ಭಾಗವತರಾಗಿ ತಮ್ಮ ಕಲಾ ಸೇವೆಯನ್ನು ಮುಂದುವರೆಸಿದ್ದರು.