ಉಡುಪಿ, ಅ. 13 (DaijiworldNews/AA): ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯಡಿ ಉಡುಪಿ ಜಿಲ್ಲೆಯು ಕರ್ನಾಟಕದಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಫಲಾನುಭವಿಗಳಿಗೆ ಮೂರು ಹಂತಗಳ ಸಾಲ ವಿತರಣೆಯಲ್ಲಿ ಜಿಲ್ಲೆಯು ಒಟ್ಟಾರೆ ಶೇ. 132.29 ರಷ್ಟು ಸಾಧನೆ ಮಾಡಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ.

ಆರು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 2,18,575 ಜನಸಂಖ್ಯೆ ಹೊಂದಿರುವ ಉಡುಪಿ ಜಿಲ್ಲೆಯು, ಮೊದಲ ಹಂತದಲ್ಲಿ 4,812 ಗುರಿಗೆ ಪ್ರತಿಯಾಗಿ 4,843 ಫಲಾನುಭವಿಗಳಿಗೆ ಸಾಲ ವಿತರಿಸಿದೆ (ಶೇ.102). ಎರಡನೇ ಹಂತದಲ್ಲಿ, 3,357 ಗುರಿಗೆ ಪ್ರತಿಯಾಗಿ 2,926 ಫಲಾನುಭವಿಗಳಿಗೆ ತಲಾ 20,000ರೂ. ಸಾಲ ನೀಡಲಾಗಿದೆ (ಶೇ. 98). ಹಾಗೆಯೇ, ಮೂರನೇ ಹಂತದಲ್ಲಿ 1,672 ಗುರಿಗೆ ಪ್ರತಿಯಾಗಿ 1,026 ಫಲಾನುಭವಿಗಳಿಗೆ ತಲಾ 50,000 ರೂ. ಸಾಲವನ್ನು ವಿತರಿಸಲಾಗಿದೆ (ಶೇ. 95). ಒಟ್ಟಾರೆಯಾಗಿ ಶೇ. 132.29 ರಷ್ಟು ಸಾಧನೆ ಮಾಡಿದೆ.
ಇಲ್ಲಿಯವರೆಗೆ ಒಟ್ಟು 3,288 ಬೀದಿ ವ್ಯಾಪಾರಿಗಳು ಡಿಜಿಟಲ್ ವಹಿವಾಟುಗಳನ್ನು ಅಳವಡಿಸಿಕೊಂಡಿದ್ದಾರೆ.
ಮೊದಲ ಹಂತದಲ್ಲಿ ತಲಾ 10,000 ರೂ. ದಂತೆ ಒಟ್ಟು 4.85 ಕೋಟಿ ರೂ. ಮೌಲ್ಯದ ಸಾಲ ವಿತರಿಸಲಾಗಿದೆ. ಜೊತೆಗೆ ಫಲಾನುಭವಿಗಳ ಖಾತೆಗೆ 0.14 ಕೋಟಿ ರೂ. ಬಡ್ಡಿ ಸಬ್ಸಿಡಿ ಮತ್ತು ಡಿಜಿಟಲ್ ವಹಿವಾಟುಗಳ ಕ್ಯಾಶ್ಬ್ಯಾಕ್ ಆಗಿ 0.21 ಕೋಟಿ ರೂ. ಜಮೆಯಾಗಿದೆ.
ಎರಡನೇ ಹಂತದಲ್ಲಿ ತಲಾ 20,000 ರೂ. ದಂತೆ ಒಟ್ಟು 5.85 ರೂ. ಕೋಟಿ ಮೌಲ್ಯದ ಸಾಲ ವಿತರಿಸಲಾಗಿದ್ದು, 20 ರೂ. ಲಕ್ಷ ಕ್ಯಾಶ್ಬ್ಯಾಕ್ ಲಾಭ ದೊರೆತಿದೆ.
ಮೂರನೇ ಹಂತದಲ್ಲಿ ತಲಾ 50,000 ರೂ. ದಂತೆ ಒಟ್ಟು 5.07ರೂ. ಕೋಟಿ ಮೌಲ್ಯದ ಸಾಲ ನೀಡಲಾಗಿದ್ದು, 0.18 ಲಕ್ಷ ರೂ. ಕ್ಯಾಶ್ಬ್ಯಾಕ್ ಪ್ರಯೋಜನ ಲಭಿಸಿದೆ.
ಅತ್ಯುತ್ತಮ ಸಾಧನೆಗಾಗಿ ಗುರುತಿಸಲ್ಪಟ್ಟಿರುವ ಅಗ್ರ ಹತ್ತು ಜಿಲ್ಲೆಗಳು: ಉಡುಪಿ, ಕೊಡಗು, ಯಾದಗಿರಿ, ಧಾರವಾಡ, ಚಾಮರಾಜನಗರ, ಬಳ್ಳಾರಿ, ದಾವಣಗೆರೆ, ತುಮಕೂರು, ರಾಮನಗರ, ಮತ್ತು ಕೊಪ್ಪಳ.
ಗುರುತಿಸಲ್ಪಟ್ಟ ಫಲಾನುಭವಿಗಳಲ್ಲಿ ಉಡುಪಿಯಿಂದ, ಕಾರ್ಕಳದ ಬಟ್ಟೆ ವ್ಯಾಪಾರಿ ಪ್ರಸಾದ್ ಅವರು ಪಿಎಂ ಸ್ವನಿಧಿ ಮೂರನೇ ವಾರ್ಷಿಕೋತ್ಸವದ ಆಚರಣೆಗೆ ಆಯ್ಕೆಯಾಗಿದ್ದರು. ಕುಂದಾಪುರದ ಚಮ್ಮಾರ್ ಮಣಿಕಂಠ ಅವರು ಪ್ರಧಾನ ಮಂತ್ರಿಗಳೊಂದಿಗೆ ಸಂವಾದ ನಡೆಸಿದರು. ಅಲ್ಲದೆ, ಉಡುಪಿಯ ಸಿಹಿ ತಿಂಡಿ ವ್ಯಾಪಾರಿ ಹೇಮಲತಾ ಅವರು ದೆಹಲಿ ಮತ್ತು ಬೆಂಗಳೂರಿನಲ್ಲಿ ನಡೆದ ಆಚರಣೆಗಳಲ್ಲಿ ಭಾಗವಹಿಸಿದ್ದರು.
ಪಿಎಂ ಸ್ವನಿಧಿ ಯೋಜನೆಯು ಸಣ್ಣ ಮತ್ತು ಬೀದಿ ವ್ಯಾಪಾರಿಗಳಿಗೆ ಅನುಕೂಲಕರವಾಗಿದೆ. ಈ ಯೋಜನೆಯು ಹೆಚ್ಚಿನ ಬಡ್ಡಿಯ ಸಾಲಗಳನ್ನು ತಪ್ಪಿಸಲು ಮತ್ತು ಆರ್ಥಿಕ ವಿಶ್ವಾಸವನ್ನು ಬೆಳೆಸಲು ನೆರವಾಗಿದೆ. ಅಲ್ಲದೆ, ಇದು ವ್ಯಾಪಾರಿಗಳಲ್ಲಿ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಿದೆ.
"2022 ರಿಂದಲೂ ಉಡುಪಿ ಜಿಲ್ಲೆಯು ರಾಜ್ಯದಲ್ಲಿ ಸತತವಾಗಿ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ. ಈ ಯೋಜನೆಯು ವ್ಯಾಪಾರಿಗಳ ಸ್ವಾವಲಂಬನೆ ಮತ್ತು ಆರ್ಥಿಕ ಶಿಸ್ತನ್ನು ಹೆಚ್ಚಿಸಿದೆ" ಎಂದು ಪಿಎಂ ಸ್ವನಿಧಿ (ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್) ವ್ಯವಸ್ಥಾಪಕ ರಾಮಕೃಷ್ಣ ಅವರು ತಿಳಿಸಿದ್ದಾರೆ.
"ಉಡುಪಿಯಲ್ಲಿ ಸಾಲ ಮರುಪಾವತಿ ಶೇ. 95 ರಷ್ಟಿದೆ. ಫಲಾನುಭವಿಗಳು ಹಣವನ್ನು ನಿಗದಿತ ಉದ್ದೇಶಕ್ಕಾಗಿ ಬಳಸಬೇಕು ಮತ್ತು ಸಕಾಲದಲ್ಲಿ ಮರುಪಾವತಿ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು. ಏಕೆಂದರೆ ವಿಳಂಬ ಪಾವತಿಯು ಅವರ ಸಿಬಿಲ್ ಸ್ಕೋರ್ ಮತ್ತು ಮುಂದಿನ ಸಾಲದ ಅರ್ಹತೆಯ ಮೇಲೆ ಪರಿಣಾಮ ಬೀರುತ್ತದೆ" ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಅರುಣ್ ಕುಮಾರ್ ಅವರು ಹೇಳಿದರು.
ಪಿಎಂ ಸ್ವನಿಧಿ ಯೋಜನೆಯ ಉಡುಪಿಯ ಈ ಅನುಕರಣೀಯ ಅನುಷ್ಠಾನವು ಕರ್ನಾಟಕದ ಇತರ ಜಿಲ್ಲೆಗಳಿಗೆ ಒಂದು ಮಾನದಂಡವನ್ನು ನಿಗದಿಪಡಿಸಿದೆ.