ಮಂಗಳೂರು, ಅ. 12 (DaijiworldNews/AA): ಕಾವೂರಿನ ಸಹಕಾರಿ ಸಂಸ್ಥೆಯೊಂದರಲ್ಲಿ ಅಸಲಿ ಚಿನ್ನಾಭರಣಗಳೆಂದು ನಂಬಿಸಿ ನಕಲಿ ಚಿನ್ನಾಭರಣ ಅಡವಿಟ್ಟು 6.24 ಲಕ್ಷ ರೂ. ವಂಚಿಸಿದ್ದ ಮೂವರು ಆರೋಪಿಗಳನ್ನು ಕಾವೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಆಕಾಶಭವನದ ಆನಂದ ನಗರ ನಿವಾಸಿ ಹಾರೀಫ್ ಅಬೂಬಕ್ಕರ್ (39), ನಂತೂರು ಬಿಕರ್ನಕಟ್ಟೆಯ ನಿವಾಸಿ ಮೊಹಮ್ಮದ್ ಆಶೀಕ್ ಕಟ್ಟತ್ತಾರ್ ಹುಸೈನ್ (34) ಮತ್ತು ಪುತ್ತೂರು ತಾಲೂಕು ಬೆಳಂದೂರು ಗ್ರಾಮದ ನಿವಾಸಿ ಅಬ್ದುಲ್ ರಮೀಝ್ (33) ಎಂದು ಗುರುತಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಅಕ್ಟೋಬರ್ 9 ರಂದು ಹಾರೀಫ್ ಅಬೂಬಕ್ಕರ್ ಅವರು ಕಾವೂರು ಬಳಿಯ ವಿವಿದೋದ್ದೇಶ ಸಹಕಾರ ಸಂಘದಲ್ಲಿ ಅಸಲಿ ಚಿನ್ನಾಭರಣಗಳೆಂದು ನಂಬಿಸಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು 6.24 ಲಕ್ಷ ರೂ. ಸಾಲ ಪಡೆದಿದ್ದ. ಆದರೆ, ನಂತರ ಅಡವಿಟ್ಟ ಚಿನ್ನಾಭರಣದ ಬಗ್ಗೆ ಅನುಮಾನ ಬಂದ ಹಿನ್ನೆಲೆ ಅವುಗಳನ್ನು ಪರಿಶೀಲಿಸಿದಾಗ ನಕಲಿ ಎಂದು ದೃಢಪಟ್ಟಿವೆ.
ಈ ಬಗ್ಗೆ ಸಹಕಾರಿ ಸಂಘವು ನೀಡಿದ ದೂರಿನ ಆಧಾರದ ಮೇಲೆ ಕಾವೂರು ಪೊಲೀಸರು ತನಿಖೆ ಕೈಗೊಂಡು, ಮೂವರು ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳಿಂದ 5 ಲಕ್ಷ ರೂ. ನಗದು, ಸುಮಾರು 45 ಗ್ರಾಂ ತೂಕದ ನಕಲಿ ಚಿನ್ನಾಭರಣಗಳು, ಅಂದಾಜು 20 ಲಕ್ಷ ರೂ. ಮೌಲ್ಯದ ಒಂದು ಕಾರು ಮತ್ತು ಮೊಬೈಲ್ ಹ್ಯಾಂಡ್ಸೆಟ್ಗಳನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಒಟ್ಟು ಸೊತ್ತುಗಳ ಮೌಲ್ಯ ಸುಮಾರು 26.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
"ಇದು ಉದ್ದೇಶಪೂರ್ವಕವಾಗಿ ವಂಚನೆ ಮಾಡುವ ಲೆಕ್ಕಾಚಾರದ ಪ್ರಯತ್ನವಾಗಿತ್ತು. ನಮ್ಮ ತಂಡದ ತ್ವರಿತ ಕಾರ್ಯಾಚರಣೆಯಿಂದಾಗಿ ಆರೋಪಿಗಳನ್ನು ಕೆಲವೇ ದಿನಗಳಲ್ಲಿ ಬಂಧಿಸಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಕೆ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ಕಾವೂರು ಠಾಣಾ ಪೊಲೀಸ್ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರು, ಪಿಎಸ್ಐ ಮಲ್ಲಿಕಾರ್ಜುನ್ ಬಿರಾದಾರ, ಎಎಸ್ಐ ಚಂದ್ರಪ್ಪ ಸುನೀಲ್, ಮತ್ತು ಹೆಡ್ ಕಾನ್ಸ್ಟೆಬಲ್ಗಳಾದ ಸಂಬಾಜಿ ಕದಂ, ಕೆಂಚನ್ ಗೌಡ, ಪ್ರಮೋದ್ ಕುಮಾರ್, ಕಾನ್ಸ್ಟೆಬಲ್ಗಳಾದ ನಾಗರಾಜ್ ಬೈರಗೊಂಡ, ಪ್ರವೀಣ್, ರಿಯಾಝ್, ತೀರ್ಥಪ್ರಸಾದ್ ಮತ್ತು ಆನಂದ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಭಾರತೀಯ ನ್ಯಾಯ ಸಂಹಿತೆ, 2023 ರ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.