ಮಂಗಳೂರು, ಅ. 12 (DaijiworldNews/AA): ಉಳ್ಳಾಲದ ರಾಷ್ಟ್ರೀಯ ಹೆದ್ದಾರಿ 66 (NH-66) ರ ಸೋಮೇಶ್ವರ ಉಚ್ಚಿಲ ಜಂಕ್ಷನ್ ಬಳಿಯ ಗುಜರಿ ಅಂಗಡಿಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ನಷ್ಟವುಂಟಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಅಂಗಡಿಗೆ ಬೆಂಕಿ ತಗುಲಿದ ಪರಿಣಾಮ ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿತ್ತು. ದಟ್ಟ ಹೊಗೆಯಿಂದಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸುಮಾರು ಎರಡು ಗಂಟೆಗಳ ಕಾಲ ಗುಜರಿ ಅಂಗಡಿ ಸೇರಿದಂತೆ ಪಕ್ಕದ ಮನೆಗೂ ವ್ಯಾಪಿಸಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿತ್ತು.
ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಧಾವಿಸಿದ್ದು, ಅಲ್ಲಿ ರಾಶಿ ಹಾಕಿದ್ದ ಹೆಚ್ಚಿನ ಪ್ರಮಾಣದ ಗುಜರಿ ವಸ್ತುಗಳಿಂದಾಗಿ ಬೆಂಕಿ ನಂದಿಸಲು ಅವರಿಗೆ ತೀವ್ರ ತೊಂದರೆಯಾಯಿತು. ಬೆಂಕಿಯನ್ನು ನಿಯಂತ್ರಣಕ್ಕೆ ತರಲು 30 ನಿಮಿಷಗಳಿಗಿಂತ ಹೆಚ್ಚು ಸಮಯ ಬೇಕಾಯಿತು ಎಂದು ವರದಿಯಾಗಿದೆ.
ಉಳ್ಳಾಲ ಮತ್ತು ದಕ್ಷಿಣ ಕನ್ನಡ ಸಂಚಾರಿ ವಿಭಾಗದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು, ಹೆದ್ದಾರಿಯಲ್ಲಿ ಸಂಚಾರವನ್ನು ನಿರ್ವಹಿಸಿದರು. ಸ್ಥಳದಲ್ಲಿ ಜಮಾವಣೆಗೊಂಡಿದ್ದ ಜನರನ್ನು ಸ್ಥಳದಿಂದ ತೆರಳುವಂತೆ ಮನವಿ ಮಾಡಿದರು.
ಇದುವರೆಗೆ ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಅದೃಷ್ಟವಶಾತ್, ಯಾವುದೇ ಸಾವು-ನೋವು ಅಥವಾ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ.