ಮಂಗಳೂರು, ಅ. 12 (DaijiworldNews/AA): ಚಲಿಸುತ್ತಿದ್ದ ಕಾರು ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಸುಟ್ಟುಹೋಗಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ.

ಕಾವೂರಿನಿಂದ ಕೊಂಚಾಡಿ ಕಡೆಗೆ ಹೋಗುತ್ತಿದ್ದ ಕಾರಿನ ಮುಂಭಾಗದ ಬಾನೆಟ್ನಿಂದ ಹೊಗೆ ಬರುತ್ತಿರುವುದನ್ನು ಚಾಲಕರಾದ ಸೂಜಿಗುಡ್ಡೆಯ ನಿವಾಸಿ ಶಿವಾನಂದ ಗಮನಿಸಿದ್ದಾರೆ. ಕೂಡಲೇ ರಸ್ತೆಯ ಬದಿಯಲ್ಲಿ ವಾಹನವನ್ನು ನಿಲ್ಲಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಕಾರು ಧಗಧಗನೆ ಹೊತ್ತಿ ಉರಿಯಲು ಪ್ರಾರಂಭಿಸಿದೆ.
ತಕ್ಷಣವೇ ಕದ್ರಿ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಆದರೆ, ಅವರು ಬರುವಷ್ಟರಲ್ಲಿ ವಾಹನವು ಬಹುತೇಕ ಸುಟ್ಟು ಹೋಗಿತ್ತು.
ಬೆಂಕಿಗೆ ಆಹುತಿಯಾದ ಕಾರು 2008ರ ಮಾಡೆಲ್ನ ವೋಕ್ಸ್ವ್ಯಾಗನ್ ಆಗಿದ್ದು, ಘಟನೆ ಸಂಭವಿಸಿದಾಗ ಶಿವಾನಂದ್ ಒಬ್ಬರೇ ಕಾರಿನಲ್ಲಿದ್ದರು. ಈ ಅಗ್ನಿ ದುರಂತದಿಂದ ಸುಮಾರು 4 ರಿಂದ 5 ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.